ಜಿಲ್ಲೆ

ಜಾನಪದ ವಿವಿಯಲ್ಲಿ ಕುರ್ಚಿಗಾಗಿ ಕಿತ್ತಾಟ

ಗೌಡಪ್ಪ ಬನ್ನೆ ಶಿಗ್ಗಾಂವಿ

ಕುರ್ಚಿಗಾಗಿ ಗುದ್ದಾಟ, ವರ್ಗಾವಣೆಗೆ ಹೈಕೋರ್ಟ್​ನಿಂದ ತಡೆ ತಂದರೂ ಹಾಜರುಪಡಿಸಿಕೊಳ್ಳಲು ಹಿಂದೇಟು ಹಾಕಿದ ಕುಲಪತಿ. ಕಚೇರಿಯಲ್ಲಿಯೇ ಠಿಕಾಣಿ ಹೂಡಿದ ಕುಲಸಚಿವ (ಆಡಳಿತ). ಇಂತಹ ಘಟನೆಗೆ ಸಾಕ್ಷಿಯಾಗಿರುವುದು ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ, ಜಿಲ್ಲೆಯ ಮುಕುಟಪ್ರಾಯವಾಗಿರುವ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

ಜಾವಿವಿಯಲ್ಲಿ ಕುಲಸಚಿವರಾಗಿದ್ದ (ಆಡಳಿತ) ಪ್ರೊ. ಕೆ.ಎನ್. ಗಂಗಾನಾಯಕ ಅವರನ್ನು ಸರ್ಕಾರ ಜ. 14ರಂದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಿದೆ. ಇದನ್ನು ಪ್ರಶ್ನಿಸಿ ಕುಲಸಚಿವ ಗಂಗಾನಾಯಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇವರ ಮನವಿ ಪುರಸ್ಕರಿಸಿದ ಹೈಕೋರ್ಟ್ ವರ್ಗಾವಣೆಗೆ ತಡೆ ನೀಡಿ, ಜಾವಿವಿ ಕಚೇರಿ ಅವಧಿಯಲ್ಲಿ ಹಾಜರಾಗುವಂತೆ ಮಧ್ಯಂತರ ಆದೇಶ ಮಾಡಿದೆ. ಕೋರ್ಟ್ ಆದೇಶದಂತೆ ಜ. 27ರಂದು ಜಾವಿವಿಗೆ ಆಗಮಿಸಿದ ಗಂಗಾನಾಯಕ, ಕುಲಪತಿ ಪ್ರೊ. ಡಿ.ಬಿ.ನಾಯ್ಕ ಅವರನ್ನು ಭೇಟಿಯಾಗಿ ಕೋರ್ಟ್ ಆದೇಶದಂತೆ ಮೊದಲಿದ್ದ ಹುದ್ದೆಗೆ ನಿಯೋಜನೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ, ಕುಲಪತಿ ಪ್ರೊ. ಡಿ.ಬಿ. ನಾಯ್ಕ ಅವರು ಕುಲಸಚಿವ ಪ್ರೊ. ಗಂಗಾನಾಯಕ ಅವರಿಗೆ ಕಚೇರಿ ಸಮಯಕ್ಕೆ ಐದು ನಿಮಿಷ ತಡವಾಗಿ ಬಂದಿದ್ದೀರಿ ಎಂದು ಕಾರಣ ನೀಡಿ ನಿಯೋಜನೆ ಮಾಡಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ಮರುದಿನ ಪ್ರೊ. ಗಂಗಾನಾಯಕ ಜಾವಿವಿಗೆ ಬರುವ ಮುನ್ನವೇ ಜಾವಿವಿಯ ಮತ್ತೊಬ್ಬ ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ ಅವರನ್ನು ಪ್ರೊ. ಗಂಗಾನಾಯಕ ಅವರ ಹುದ್ದೆಗೆ ಪ್ರಭಾರಿಯಾಗಿ ನೇಮಕ ಮಾಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ. ವರ್ಗಾವಣೆಗೊಂಡರೂ ಮೈಸೂರಿಗೆ ಹಾಜರಾಗದೇ ಇಲ್ಲಿಯೇ ಇರುತ್ತೇನೆ ಎಂದು ಹಠಕ್ಕೆ ಬಿದ್ದಿರುವ ಪ್ರೊ. ಗಂಗಾನಾಯಕ ಅವರು ತಮ್ಮ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ.

ನನಗೆ ಕುಲಸಚಿವರನ್ನು ನೇಮಕ ಮಾಡುವ ಅಧಿಕಾರ ಇಲ್ಲ. ಸರ್ಕಾರವೇ ನೇಮಕಾತಿಯನ್ನು ಮಾಡುತ್ತದೆ. ಸರ್ಕಾರದ ಆದೇಶದ ಮೇರೆಗೆ ಪ್ರೊ. ಗಂಗಾನಾಯಕ ಅವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಿ ಅವರ ಸ್ಥಾನಕ್ಕೆ ಪ್ರಭಾರಿಯನ್ನು ನೇಮಕ ಮಾಡಿದ್ದೇನೆ. ಸರ್ಕಾರ ಮರು ನೇಮಕ ಮಾಡಿಕೊಳ್ಳುವಂತೆ ಆದೇಶ ಮಾಡಿದರೆ ಅದೇಶದಂತೆ ನಡೆದುಕೊಳ್ಳಲಾಗುವುದು. | ಪ್ರೊ. ಡಿ.ಬಿ. ನಾಯ್ಕ, ಕುಲಪತಿ ಜಾವಿವಿ
ನಾನು ಜಾವಿವಿಯ ಕುಲಸಚಿವನಾಗಿ ಇನ್ನೂ ಒಂದು ವರ್ಷವಾಗಿಲ್ಲ. ಸರ್ಕಾರದ ನಿಯಮದ ಪ್ರಕಾರ ವರ್ಷದ ಒಳಗೆ ವರ್ಗಾವಣೆ ಮಾಡುವಂತಿಲ್ಲ. ಅಲ್ಲದೆ, ನನ್ನ ನಿವೃತ್ತಿ ಅವಧಿ ಮೂರು ತಿಂಗಳು ಮಾತ್ರ ಇದೆ. ಅಂಥದ್ದರಲ್ಲಿ ದಿಢೀರ್ ವರ್ಗಾವಣೆ ಮಾಡಿದ್ದು ಸರಿಯಲ್ಲ. ನನಗೆ ನ್ಯಾಯಾಲಯದ ಮೇಲೆ ಭರವಸೆ ಇದೆ. ನಮ್ಮ ವಕೀಲರ ಸಲಹೆಯಂತೆ ಮುಂದಿನ ಹೆಜ್ಜೆ ಇಡುತ್ತೇನೆ. | ಪ್ರೊ. ಕೆ.ಎನ್. ಗಂಗಾನಾಯಕ, ಕುಲಸಚಿವ (ಆಡಳಿತ) ಜಾವಿವಿ