ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಾನಪದ ಭವನಕ್ಕೆ ಸೂಕ್ತ ಸ್ಥಳ ಒದಗಿಸುವ ಜತೆಗೆ ಅಗತ್ಯ ಅನುದಾನವನ್ನು ಮಂಜೂರಿ ಮಾಡುವುದು ಸೇರಿದಂತೆ 6 ಪ್ರಮುಖ ಬೇಡಿಕೆ ಈಡೇರಿಸುವಂತೆ ಇಲ್ಲಿ ನಡೆದ 2ನೇ ಜಿಲ್ಲಾ ಜಾನಪದ ಸಮ್ಮೇಳನವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದೆ.
ಸಮ್ಮೇಳನದ ರೂವಾರಿ ಡಾ. ರಾಜಕುಮಾರ ಹೆಬ್ಬಾಳೆ ಸಮ್ಮುಖ ಹಾಗೂ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ಸಮ್ಮುಖದಲ್ಲಿ ಸೋಮವಾರ ಸಂಜೆ ಇಲ್ಲಿನ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಮಾರೋಪದಲ್ಲಿ ಆರು ನಿರ್ಣಯಗಳು ಮಂಡಿಸಲಾಯಿತು. ಇದಕ್ಕೆ ವೇದಿಕೆಯಲ್ಲಿದ್ದ ಸಾಹಿತಿಗಳು, ಗಣ್ಯರು ಸೇರಿದಂತೆ ನೆರೆದ ಕನ್ನಡಾಭಿಮಾನಿಗಳು ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿ ನೀಡಿದರು.
ಬೀದರ್ ನಲ್ಲಿ ಆಯೋಜಿಸಲು ಉದ್ದೇಶಿಸಿದ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ.ಅನುದಾನ ನೀಡಬೇಕು. ವಿವಿಧ ವಸತಿ ಯೋಜನೆಗಳಡಿ ಶೇ. 10ರಷ್ಟು ಜಾನಪದ ಕಲಾವಿದರಿಗೆ ನಿವೇಶನ ಮಂಜೂರಿ ಮಾಡಲು ಸರ್ಕಾರ ಆದೇಶ ಹೊರಡಿಸಬೇಕು. ರಾಜ್ಯ ಸರ್ಕಾರ ಜಾನಪದ ಕಲಾವಿದರಿಗೆ ನೀಡುತ್ತಿರುವ 2 ಸಾವಿರ ರೂ. ಮಾಸಾಶನ 5 ಸಾವಿರಕ್ಕೇರಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಜಾನಪದ ಸಂಘ, ಸಂಸ್ಥೆಗಳಿಗೆ ಕೆಕೆಆರ್ ಡಿಬಿಯಿಂದ ವಿಶೇಷ ಅನುದಾನ ನೀಡಬೇಕು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೀದರ್ ನಲ್ಲಿನ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ನಿವೇಶನ ದೊರೆತಿದ್ದು, ಕಟ್ಟಡ ಕಾಮಗಾರಿಗೆ 5 ಕೋಟಿ ರೂ. ಅನುದಾನ ಕೊಡಬೇಕೆಂದು ಆಗ್ರಹಿಸಲಾಗಿದೆ.
ಸಾಹಿತಿಗಳಾದ ಎಂ.ಜಿ.ದೇಶಪಾಂಡೆ, ಚಂದ್ರಪ್ಪ ಹೆಬ್ಬಾಳಕರ್, ಮಾನಶೆಟ್ಟಿ ಬೆಳಕೇರಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಕಾರ್ಯದರ್ಶಿ ಪ್ರೊ.ಎಸ್.ಬಿ ಬಿರಾದಾರ, ಪ್ರಮುಖರಾದ ವೈಜಿನಾಥ ಕಮಠಾಣೆ, ನಿಜಲಿಂಗಪ್ಪ ತಗಾರೆ, ಲುಂಬಿಣಿ ಗೌತಮ, ಶಿವಯ್ಯ ಸ್ವಾಮಿ ಇದ್ದರು. ರಾಜಕುಮಾರ ಮಡಕಿ ಸ್ವಾಗತಿಸಿದರು. ಸುನಿತಾ ಬಿಕ್ಲೆ ನಿರೂಪಣೆ ಮಾಡಿದರು. ಚನ್ನಬಸವ ಕಾಮಣ್ಣ ವಂದಿಸಿದರು.
ಎರಡು ದಿನದ ಜಿಲ್ಲಾ ಜಾನಪದ ಸಮ್ಮೇಳನ ಯಶಸ್ವಿಯಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಜಾನಪದ ತಜ್ಞರು, ಸಾಹಿತಿಗಳು ಹಾಗೂ ಗಣ್ಯರು ಪಾಲ್ಗೊಂಡು ಅರ್ಥಪೂರ್ಣ ವಿಷಯ ಮಂಡಿಸಿದ್ದಾರೆ. ಜಾನಪದ ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ಪೂರಕವಾಗಿ ನಡೆದಿದೆ.| ಡಾ. ರಾಜಕುಮಾರ ಹೆಬ್ಬಾಳೆರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ