ಚಾಮರಾಜನಗರ: ಸಮಾನತೆ, ಮಾನವೀಯ ಮೌಲ್ಯಗಳನ್ನು ಕಲಿಸುವ ಜಾನಪದ ಪ್ರತಿಯೊಂದು ಕಲೆಗಳ ತಾಯಿಬೇರಾಗಿದೆ ಎಂದು ಖ್ಯಾತ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾನಪದ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಕಲೆಯಾಗಿದೆ. ಜಿಲ್ಲೆಯ ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ನಮ್ಮ ಸಾಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಕನ್ನಡ ಜಾನಪದ ಸಾಹಿತ್ಯವನ್ನು ಅನೇಕ ಸಾಹಿತಿಗಳು ಮತ್ತಷ್ಟು ಜಗತ್ತಿಗೆ ಹರಡಿದ್ದಾರೆ. ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ನಮ್ಮ ಕನ್ನಡದ ಸೊಗಡು ಮತ್ತು ಜಾನಪದ ಸಂಸ್ಕೃತಿಯನ್ನು ಮೇಳೈಸಿದೆ ಎಂದು ಬಣ್ಣಿಸಿದರು.
ಯುವಜನರು ಮೊಬೈಲ್ ದಾಳಿಗೆ ಸಿಕ್ಕಿ ನಮ್ಮ ಜಾನಪದ ಸಂಸ್ಕೃತಿಗಳಿಂದ ವಿಮುಖರಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಹಾವಳಿಗೆ ಸಿಕ್ಕಿ ನಮ್ಮ ಮೂಲ ಸೊಗಡನ್ನು ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದ ಜಾನಪದ ಕಥೆ, ಒಗಟು, ಹಾಡು, ಲಾವಣಿ, ಸೋಭಾನೆ ಹಾಗೂ ಇನ್ನಿತರೆ ಜಾನಪದಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಸಂಚಾಲಕಿ ಜಮುನಾ ಮಾತನಾಡಿ, ನಮ್ಮ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಇಂದಿನ ಪಾಶ್ಚಾತ್ಯ ಪರಂಪರೆಯ ಹೊಡೆತದಿಂದ ನಮ್ಮ ಜಾನಪದ ಸಂಸ್ಕೃತಿ ಮತ್ತು ಮೌಲ್ಯಗಳು ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರಾದೇಶಿಕ ಜಾನಪದ ಸೊಗಡನ್ನು ಮುಂದಿನ ಪೀಳಿಗೆಗೆ ಹಾಗೂ ವಿದ್ಯಾರ್ಥಿನಿಯರಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.
ಗಮನಸೆಳೆದ ಜನಪದ ಪರಿಕರಗಳು:
ಜೆಎಸ್‌ಎಸ್ ಮಹಿಳಾ ಕಾಲೇಜಿನ ಆವರಣದಲ್ಲಿ ಜನಪದ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಜಾನಪದ ಪರಿಕರಗಳ ಪ್ರದರ್ಶನ ಗಮನಸೆಳೆಯಿತು. ನಮ್ಮ ಜನಪದೀಯರು ಎತ್ತಿನಗಾಡಿ ಬಂಡಿ, ಪುಟ್ಟ, ಮೊರ, ಸೇರು, ಪಾವು ಹಾಗೂ ಇನ್ನಿತರೆ ಹತ್ತಾರು ಜನಪದಕ್ಕೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನಾ ಮುಖ್ಯ ಅತಿಥಿಗಳನ್ನು ಸಾಂಪ್ರಾಯಿಕವಾಗಿ ಎತ್ತಿನಗಾಡಿಯಲ್ಲಿ ಕರೆತರಲಾಯಿತು. ಅತಿಥಿಗಳನ್ನು ವಿದ್ಯಾರ್ಥಿನಿಯರು ಹಾರತಿ ಬೆಳಗುವ ಮೂಲಕ ಬರಮಾಡಿಕೊಂಡರು. ಬಳಿಕ ಒಕ್ಕಣಕ್ಕೆ ಧಾನ್ಯವನ್ನು ಸುರಿದು, ಜನಪದ ವಾದ್ಯಗಳನ್ನು ನುಡಿಸುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿಯರು ಸೀರೆ ತೊಟ್ಟು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿಂದೆ ನಮ್ಮ ಜಾನಪದರು ಬಳಕೆ ಮಾಡುತ್ತಿದ್ದ ಗೃಹ ಉಪಯೋಗಿ ವಸ್ತುಗಳು, ಜಾನಪದ ಪರಿಕರಗಳು ನಮಗೆ ಪರಿಚಯವೇ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ನಪದಜಾತ್ರೆ ನಿಜಕ್ಕೂ ಅರ್ತಪೂರ್ಣವಾಗಿತ್ತು. ನಮ್ಮ ಶ್ರೀಮಂತ ಜಾನಪದ ಸಂಸ್ಕೃತಿಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಕುತೂಹಲ ಮೂಡಿತು.
-ಎನ್.ಸಿಂಧು, ತೃತೀಯ ಬಿಎ, ಜೆಎಸ್‌ಎಸ್ ಮಹಿಳಾ ಕಾಲೇಜು, ಚಾಮರಾಜನಗರ