ಜಿಲ್ಲೆ

ಜಾನಪದ ನೃತ್ಯಕ್ಕೂ ಶಾಸ್ತ್ರೀಯ ಮಾನ್ಯತೆ ಸಿಗಲಿ: ಹಂಸಲೇಖ ಒತ್ತಾಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಜಾನಪದ ಸಂಗೀತದಂತೆಯೇ ಜಾನಪದ ನೃತ್ಯಕ್ಕೂ ಶಾಸ್ತ್ರೀಯ ಮಾನ್ಯತೆ ದೊರೆಯಬೇಕಿದೆ ಎಂದು ಸಂಗೀತ ನಿರ್ದೇಶಕ, ಹಂಸಲೇಖ ದೇಸಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ.ಹಂಸಲೇಖ ಹೇಳಿದರು.

ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಹಂಸಲೇಖ ದೇಸಿ ವಿದ್ಯಾಸಂಸ್ಥೆಯ ಸರ್ಟಿಫಿಕೇಟ್ ಕೋರ್ಸ್‌ನ ಪ್ರಮಾಣಪತ್ರ ವಿತರಣೆ, ಐ ಸಿಂಗ್ ಮೂರ್ದನಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ನೃತ್ಯಕ್ಕೆ ಶಾಸ್ತ್ರೀಯತೆ ಕೊರತೆ ಇದೆ. ಆದ್ದರಿಂದ ಈ ವಿಷಯದಲ್ಲಿ ಪಿಎಚ್.ಡಿ ಸಂಶೋಧನೆಗಳು ನಡೆದು ಮಾನ್ಯತೆ ದೊರೆಯುವಂತಾಗಬೇಕಿದೆ ಎಂದರು.

22 ವರ್ಷದ ಪರಿಶ್ರಮದ ಫಲವಾಗಿ 5ನೇ ಶಾಸ್ತ್ರೀಯವಾದ ಜಾನಪದವು ಶೈಕ್ಷಣಿಕ ಮನ್ನಣೆ ಪಡೆದುಕೊಂಡಿದೆ. ಅಂದು ಬಿತ್ತಿದ ಬೀಜ ಇದೀಗ ಫಲ ಕೊಡುತ್ತಿದೆ. ಇದಕ್ಕೆ ಸಾಕ್ಷಿ ಈ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.

ಎರಡು ದಶಕಗಳ ಕಾಲ ಇದಕ್ಕೆ ಅನೇಕ ಪ್ರಯತ್ನ ಮಾಡಿರುವೆ. ವಿಫಲವಾದದ್ದಕ್ಕೆ ಪೇಚಾಡಿರುವೆ. ಇಂತಹ ಸಂದರ್ಭದಲ್ಲಿ ಸಂಗೀತ ವಿವಿ ನನಗೆ ಜಾನಪದ ಸಂಗೀತದಲ್ಲಿ ಡಿ.ಲಿಟ್ ಮಾಡಲು ಅವಕಾಶ ನೀಡಿತು. ಇದು ಇದಕ್ಕೆ ಮಾನ್ಯತೆ ದೊರೆಯಲು ಕಾರಣವಾಯಿತು. ಅಂತೆಯೇ, ಜಾನಪದ ನೃತ್ಯಕ್ಕೂ ಶಾಸ್ತ್ರೀಯತೆ ಮಾನ್ಯತೆ ಪಡೆದುಕೊಳ್ಳುವ ಈ ನಿಟ್ಟಿನಲ್ಲಿ ಕೆಲಸಗಳು ಆಗಬೇಕು ಎಂದರು.

ಜಾನಪದ ಸಂಗೀತಕ್ಕೆ ಹೊಸ ಶಾಸ್ತ್ರೀಯತೆ ಸ್ಪರ್ಶ ನೀಡುವ ಮೂಲಕ ಅದನ್ನು ತಲಾಂತರಗಳವರೆಗೆ ಉಳಿಸಿ, ಬೆಳೆಸುವ ಕೆಲಸವಾಗಬೇಕಿದೆ. ಅದಕ್ಕಾಗಿ ಜಾನಪದಗಳಿಗೆ ಮೂಲವಾಗಿರುವ ಐದು ದನಿಗಳನ್ನು ಗುರುತಿಸಿ ಅವಕ್ಕೆ ‘ಐದನಿ’ ಗಳೆಂದು ಹೆಸರಿಡಲಾಗಿದೆ. ಐದನಿ ಸಂಗೀತ ಮಕ್ಕಳ ಬಾಯಿಯಲ್ಲಿ ನಲಿಯುವಂತೆ ಮಾಡಬೇಕಿದೆ. ಸಮಾಜದಲ್ಲಿ ಸಮಾನತೆ, ಸೌಹಾರ್ದತೆ, ಸಾಮರಸ್ಯ ಬಿತ್ತುವ ಕೆಲಸವನ್ನೂ ಐದನಿ ಸಂಗೀತ ಮಾಡಲಿ ಎಂದು ಆಶಿಸಿದರು.

ಶಾಸ್ತ್ರೀಯ ಶಿಸ್ತಿನ ಕಲಿಕೆ ಸಂಗೀತಕ್ಕೂ ಮತ್ತು ಭಾವಕ್ಕೂ ಎರಡಕ್ಕೂ ಬೆಲೆ, ಗೌರವ ತಂದುಕೊಡುತ್ತದೆ. ಆದರೆ ಈಗಿನ ಮಕ್ಕಳು ಮೊಬೈಲ್‌ನಲ್ಲೇ ಮುಳುಗಿ ಹೋಗಿದ್ದಾರೆ. ಅದುವೇ ಅವರಿಗೆ ಎಲ್ಲವನ್ನೂ ಕೊಡುತ್ತಿದೆ. ವಿನಯ ಮಾತ್ರ ಕಲಿಸುತ್ತಿಲ್ಲ. ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಾಯಭಾರಿಯಾಗಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು 10 ವರ್ಷದ ಬಾಲಕ ಏಕವಚನದಲ್ಲಿ ಮಾತನಾಡಿಸುತ್ತಾನೆ. ಇದುವೇ ಮೊಬೈಲ್ ಕರುಣಿಸಿದ ಜ್ಞಾನ. ಅದು ಬದುಕಿನ ಶಿಸ್ತನ್ನು ಕಲಿಸುತ್ತಿಲ್ಲ. ಜಾನಪದ ಉತ್ಖನನವಾಗಿರುವ ‘ಐದನಿ’ ಈ ಕೊರತೆಯ ನೀಗಿಸುವ ಕೆಲಸ ಮಾಡಲಿ ಎಂದರು.

ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ.ಮಂಜುನಾಥ್, ಹಂಸಲೇಖಾ ಸಂಗೀತ ಶಾಲೆಯ ಪ್ರಾಂಶುಪಾಲೆ ಲತಾ ಹಂಸಲೇಖ ಇದ್ದರು.

ವಿಜೇತರಿಗೆ ಚಿನ್ನ, ಬೆಳ್ಳಿ ಪದಕ

ಐ ಸಿಂಗ್ ಮೂರ್ದನಿ ಸ್ಪರ್ಧಾ ವಿಜೇತರಾದ ಐಶ್ವರ್ಯ ವಿಠ್ಠಲ್ ಅವರಿಗೆ ಚಿನ್ನದ ಪದಕ, ಸುಹಾಸ್ ನಂದೀಶ್ ಅವರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಅಂತೆಯೇ ಬಿ.ದಾಮಿನಿ, ಎಚ್.ಬಿ.ದಕ್ಷಿತಾ, ಶಶಿ ಸಂದೀಪ್ ಅವರಿಗೆ ರನ್ನರ್ ಅಪ್ ಪ್ರಶಸ್ತಿ, ಬಿ.ಎಸ್.ನಿರಂಜನ್ ಪ್ರಸಾದ್, ಸಿ.ಬಿ.ನಾಗೇಶ್, ಎನ್.ಎಂ.ಅರ್ಪಿತಾ, ಪಿ.ಸಿ.ಲತಾ, ಜೆ.ಪೂರ್ವಿತಾ ಅವರಿಗೆ ಸಮಾಧಾನಕರ ಪ್ರಶಸ್ತಿಯನ್ನು ನೀಡಲಾಯಿತು. 3000 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 36 ಸ್ಪರ್ಧೆಗಳನ್ನು ಆಯ್ದುಕೊಳ್ಳಲಾಗಿತ್ತು.