ಅಜ್ಜಂಪುರ ತಾಲೂಕು ಚಿಕ್ಕಾನಂಗಲ ಗ್ರಾಮದಲ್ಲಿ ಗೊ.ರು.ಚ ಅವರ ಬದುಕು-ಬರಹ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಾಹಿತಿ ಡಾ. ಬಸವರಾಜ್ ನೆಲ್ಲಿಸರ ಉದ್ಘಾಟಿಸಿದರು. ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಸ್ವಾಮೀಜಿ, ಜಿ.ಬಿ.ಸುರೇಶ್, ಚಂದ್ರಪ್ಪ, ಮಾಳೇನಹಳ್ಳಿ ಬಸಪ್ಪ ಇತರರಿದ್ದರು. 
ಜಿಲ್ಲೆ

ಜಾನಪದ ಕ್ಷೇತ್ರಕ್ಕೆ ಗೊ.ರು.ಚ ಕೊಡುಗೆ ಅನನ್ಯ

ಕಡೂರು: ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಗೊ.ರು.ಚ ಅವರ ಕೊಡುಗೆ ಅಪಾರ. ಜಾನಪದ, ಶರಣ ಸಾಹಿತ್ಯ ಪರಿಷತ್ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸಾಹಿತಿ ಡಾ. ಬಸವರಾಜ್ ನೆಲ್ಲಿಸರ ತಿಳಿಸಿದರು.

ಅಜ್ಜಂಪುರ ತಾಲೂಕಿನ ಚಿಕ್ಕಾನಂಗಲ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ನಾಡೋಜ ಡಾ. ಗೊ.ರು.ಚ ಅವರ ಬದುಕು-ಬರಹ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಾರಿಯ ಸಮ್ಮೇಳನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರತಿನಿಧಿಯಾಗಿ, ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯದ ನುಡಿ ಜಾತ್ರೆ ಆಯೋಜನೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಬೆಳೆಸುವ ಸಲುವಾಗಿ ಜಾನಪದ ವಿಶ್ವವಿದ್ಯಾಲಯ ಕಟ್ಟಿರುವುದು ಅವರಿಗೆ ಜಾನಪದದ ಮೇಲಿರುವ ಗೌರವವನ್ನು ಸೂಚಿಸುತ್ತದೆ. ಅವರು ರಚಿಸಿದ ಸಾಕ್ಷೃಚಿತ್ರಗಳು, ಜನಪದ ಕಲೆಯನ್ನು ಎತ್ತಿ ಹಿಡಿಯುವ ಚಲನಚಿತ್ರಗಳು, ಕರ್ನಾಟಕ ಜನಪದ ಕಲಾವಿದರಿಗೆ ಪ್ರಮುಖವಾದ ವೇದಿಕೆಗಳನ್ನು ನೀಡುವ ಮೂಲಕ ಕಲಾವಿದರ ಪ್ರತಿಭೆ ವ್ಯಕ್ತಪಡಿಸಲು ಉತ್ತಮ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಒಂದು ರೂಪಾಯಿ ದೇಣಿಗೆ ಸಂಗ್ರಹಿಸುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರು. ಅವರ ಸಾಹಿತ್ಯ ಸೇವೆಗೆ ಪ್ರಶಸ್ತಿ ರೂಪದಲ್ಲಿ ನೀಡಿದ ಸುಮಾರು 25 ಲಕ್ಷ ರೂಪಾಯಿಯನ್ನು ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರಕ್ಕೆ ಕೊಟ್ಟಿರುವುದು ಜನಪದ ಕಲೆಗೆ ಅವರು ಕೊಟ್ಟಿರುವ ವಿಶೇಷ ಪ್ರೋತ್ಸಾಹ. ನಾಡಿನಾದ್ಯಂತ ಸಾವಿರಾರು ಸಾಹಿತಿಗಳನ್ನು, ಜನಪದ ಕಲಾವಿದರನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮರುಳುಸಿದ್ಧ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಜಾನಪದ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಚಿಕ್ಕಾನಂಗಲ ಶಂಕರಪ್ಪ ಅವರನ್ನು ಗೌರವಿಸಲಾಯಿತು.

ಡಾ. ಮಾಳೇನಹಳ್ಳಿ ಬಸಪ್ಪ, ಕಸಾಪ ತಾಲೂಕು ಅಧ್ಯಕ್ಷ ಚಂದ್ರಪ್ಪ, ತಾಲೂಕು ಗೌರವಾಧ್ಯಕ್ಷ ಮರುಳು ಸಿದ್ದಪ್ಪ, ಉಪಾಧ್ಯಕ್ಷ ಗೊಂಡೆದಹಳ್ಳಿ ತಿಪ್ಪೇಶ್, ಸಾಹಿತಿ ಶಿವಕುಮಾರ್, ಕೆ.ಸಿ.ಶಿವಮೂರ್ತಿ, ಆರ್.ನಾಗೇಶ್, ಓಂಕಾರಯ್ಯ, ಸಿಎಂ ಪರಮೇಶ್ವರಪ್ಪ, ಗಂಗಾಧರಪ್ಪ, ನಾರಾಯಣಪುರ ರಾಜಣ್ಣ, ದೇವರಾಜು, ಸೋಮಣ್ಣ, ಓಂಕಾರಯ್ಯ, ಶಂಕರ್ ಲಿಂಗಪ್ಪ, ಬಸಮ್ಮ, ಗಾಯತ್ರಮ್ಮ, ವಿರೂಪಾಕ್ಷಪ್ಪ ಮತ್ತು ಗ್ರಾಮಸ್ಥರು ಇದ್ದರು.

ನಮ್ಮ ಜನಪದರು, ಶರಣರು, ಸಾಹಿತಿಗಳು, ಕವಿಗಳು ಶ್ರೀಮಂತಗೊಳಿಸಿದ ಜಾನಪದ ಕ್ಷೇತ್ರಕ್ಕೆ, ಶರಣ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಸಾಹಿತಿ ಗೊ.ರು.ಚ ಅವರು ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬಂಥ ನೂರಾರು ಜಾನಪದ ಕೃತಿಗಳನ್ನು, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರಾವು, ಅಯ್ಯನಕೆರೆ ಮುಂತಾದ ಜಾನಪದ ನಾಟಕಗಳನ್ನು ರಚಿಸಿ ಶ್ರೀಮಂತಗೊಳಿಸಿದ್ದರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಶ್ಲಾಘಿಸಿದರು. ತರೀಕೆರೆ ತಾಲೂಕಿನ ಗೊಂಡೆದಹಳ್ಳಿಯಲ್ಲಿ ಜನಿಸಿ, ಹಡಗಲು ತಿಮ್ಮಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಅಜ್ಜಂಪುರದಲ್ಲಿ ಮಾಧ್ಯಮ ಶಿಕ್ಷಣ, ಬೀರೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಮುಗಿಸಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಸಮುದಾಯ ಅಭಿವೃದ್ಧಿ ವಿಸ್ತರಣಾಧಿಕಾರಿಯಾಗಿ ಇತರ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ ಎಂದರು.