ಜಿಲ್ಲೆ

ಜಾನಪದ ಕಲೆ ಉಳಿವಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ

ಮೈಸೂರು: ಜನ ಸಂಸ್ಕೃತಿಯ ಭಾಗವಾಗಿರುವ ಜಾನಪದ ಕಲೆ ನಶಿಸಿ ಹೋಗಲು ಬಿಡಬಾರದು. ಈ ಕಲೆ ಉಳಿಸಿ, ಬೆಳೆಸಬೇಕಾಗಿದೆ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಹೇಳಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಮಾನಸಗಂಗೋತ್ರಿ ಮೈವಿವಿ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಜಾನಪದ ಪ್ರಪಂಚ, ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಕಲೆ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕಲೆ ಉಳಿಸಿ, ಬೆಳೆಸಲು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಕಲಾವಿದರಿಗೆ ಹೆಚ್ಚಿನ ಉತ್ತೇಜನ ಕೊಡಬೇಕು ಎಂದರು.

ಜಾನಪದ ಕಲೆ, ಸಂಗೀತದಿಂದ ಶುಗರ್, ಬಿಪಿ ಕಡಿಮೆಯಾಗುತ್ತದೆ. ಆದರೆ, ಆಧುನಿಕ ಕಾಲದ ಸಂಗೀತವನ್ನು ಆಲಿಸಿದರೆ ಅವು ಹೆಚ್ಚಾಗುತ್ತದೆ. ಎಲ್ಲರೂ ಮೊಬೈಲ್ ಗೀಳಿಗೆ ಬಿದ್ದಿದ್ದಾರೆ ಎಂದು ಕಳವಳವ್ಯಕ್ತಪಡಿಸಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಪ್ರತಿಯೊಂದು ಜಾನಪದ ಗೀತೆಗಳಲ್ಲಿ ಬದುಕಿನ ಸಂದೇಶವಿದೆ. ಆದ್ದರಿಂದ ಜಾನಪದ ಕಲೆಗೆ ತಾಯಿ ಬೇರು ಎಂಬ ಸ್ಥಾನವಿದೆ ಎಂದರು.

ಹಿರಿಯ ಜಾನಪದ ಕಲಾವಿದರು ಈವರೆಗೆ ಈ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಯುವ ಕಲಾವಿದರು ಆನ್‌ಲೈನ್ ಹಾಗೂ ಡಿಜಿಟಲ್ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಕಲೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಸಲಹೆ ಮಾಡಿದರು.

ಬೆಸೂರು ಮೋಹನ್ ಪಾಳೇಗಾರ್ ಅವರ ಕಾಡು ಕಣಿವೆಯ ಜಾನಪದ ಕಥೆಗಳು, ಕಾನನ ಜಾನಪದ ಕಥೆಗಳು, ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಲಲಿತಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ಅನಿತಾ ವಿಮ್ಲ ಬ್ರ್ಯಾಗ್ಸ್, ಎಚ್.ಡಿ.ಕೋಟೆ ತಾ.ಕುರುಬರ ಸಂಘದ ಮುಖಂಡ ಆನಂದ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ.ಗಂಗಾಧರ್, ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ವಿಭಾಗೀಯ ಕಾರ್ಯದರ್ಶಿ ಡಾ.ಕಾವೇರಿ ಪ್ರಕಾಶ್, ಚಾಮರಾಜ ಕ್ಷೇತ್ರ ಅಧ್ಯಕ್ಷೆ ರಾಣಿಪ್ರಭಾ, ಜಿಲ್ಲಾ ಖಜಾಂಚಿ ಡಾ.ವಿನೋದಾ, ಜಂಟಿ ಕಾರ್ಯದರ್ಶಿ ಜಿ.ರವಿಶಂಕರ್, ಎ.ಎಲ್.ಸುರೇಶ್‌ಚಂದ್ರ, ದೊರೆಸ್ವಾವಿ, ಪಲ್ಲವಿ, ಕವಿತಾ, ಬಸವರಾಜು, ರಶ್ಮಿ ಕೃಷ್ಣ ಇದ್ದರು.

ವಿವಿಧ ತಂಡದವರು ಜಾನಪದ ಗೀತಗಾಯನ ನಡೆಸಿಕೊಟ್ಟರು. ಎಂಎಂಕೆ ಮತ್ತು ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ನೃತ್ಯ, ಬನ್ನಿಕಾಳೇಶ್ವರಿ ಜಾನಪದ ಕಲಾ ತಂಡದವರು ಕಂಸಾಳೆ ನೃತ್ಯ ಪ್ರದರ್ಶಿಸಿದರು.

ಪ್ರಶಸ್ತಿ ಪುರಸ್ಕೃತರು

ಜಿಲ್ಲಾ ಜಾನಪದ ಪ್ರಪಂಚ ಪ್ರಶಸ್ತಿ: ಕುಂಬಾರಕೊಪ್ಪಲು ತಂಬೂರಿ ನಂಜೇಗೌಡ, ತತ್ಪಪದ ಹಾಡುಗಾರ ಶಿರಮಳ್ಳಿ ನಾಗೇಗೌಡ, ತಂಬೂರಿ ಕಲಾವಿದ ಕಂಪ್ಲಾಪುರ ಮಹದೇವಯ್ಯ, ದೇವರ ಮಕ್ಕಳ ಕುಣಿತದ ಪಿರಿಯಾಪಟ್ಟಣ ತಾಲೂಕಿನ ಸಣ್ಣತಮ್ಮೇಗೌಡ, ಜಾನಪದ ಸಂಘಟಕ ಹೊನ್ನೇನಹಳ್ಳಿಯ ರಾಜಯ್ಯ, ಕೋಲಾಟ ಕಲಾವಿದೆಯರಾದ ಹೂಟಗಳ್ಳಿ ಎಂ.ಪಿ.ಗೀತಾ, ನಗರದ ಟಿ.ಎನ್.ರಾಜೇಶ್ವರಿ, ಜಾನಪದ ಹಾಡುಗಾರ್ತಿಯರಾದ ಪುಷ್ಪಲತಾ ನಾರಾಯಣ, ಎಚ್.ಕೆ.ಕೋಮಲಾ, ಹುಣಸೂರು ತಾಲೂಕಿನ ಅರ್ಚನಾ, ವೀರಗಾಸೆಯ ಕಿರಾಳು ಮಹೇಶ್, ಸೋಬಾನೆ ಹಾಡುಗಾರರಾದ ಮಾದಗಳ್ಳಿಯ ಜಯಮ್ಮ, ಕಮಲಮ್ಮ, ಹೂಟಗಳ್ಳಿಯ ಎಂ.ಎಸ್. ಮಂಜುಳಮ್ಮ, ಕಂಸಾಳೆ ಕಲಾವಿದ ಸೂರಹಳ್ಳಿಯ ಹೊಣಕರ ನಾಯಕ.

ಜಿಲ್ಲಾ ಯುವ ಜಾನಪದ ಪ್ರಪಂಚ ಪ್ರಶಸ್ತಿ: ಜಾನಪದ ಹಾಡುಗಾರರಾದ ಮೈಸೂರು ತಾಲೂಕಿನ ಲಕ್ಷ್ಮೀಪುರದ ಮಹಾಲಿಂಗು, ಹದಿನಾರು ಎಂ.ಮಹಾದೇವಮೂರ್ತಿ, ಸಾಲಿಗ್ರಾಮದ ಗಜೇಂದ್ರ ಮಂಜು, ಕೆ.ಎಸ್.ಗದ್ದಿಗೆಯ ಕೆ.ಸಂಗೀತಾ, ಡಿ.ಸಾಲುಂಡಿಯ ಮಹಾದೇವ ಕಾಳಿರಾಮೇಗೌಡ, ನಗರದ ನೀತು ಚಂದ್ರಶೇಖರ್, ಕಳಸೂರು ರಾಜು, ಡೊಳ್ಳು ಕುಣಿತದ ರಮ್ಯಾ, ಕ್ಯಾತನಹಳ್ಳಿ ಯೋಗೇಶ್, ಪೂಜಾ ಕುಣಿತದ ಸಿ.ಸುಂದರೇಶ್, ಕೊಡಗಳ್ಳಿ ಪ್ರದೀಪ್, ಜಾನಪದ ಕಲಾವಿದರಾದ ಮೇಘಶ್ರೀ ಸುರೇಶ್, ಶ್ರೀನಿವಾಸಮೂರ್ತಿ ಕಿರುಗುಂದ, ಕಂಸಾಳೆಯ ಕೆ.ಜೋಗಿ ಕುಮಾರ್ ಹಾಗೂ ತೇಜನಾಯಕ.