ಹುಮನಾಬಾದ್: ದೇಶದ ಭವ್ಯ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸಿ ಜಾನಪದ ಕಲೆ ಜೀವಂತವಿಡಲು ವಿಶೇಷವಾಗಿ ಯುವ ಜನತೆ ಸೇರಿ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು, ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರು ಹೋಗುತ್ತಿದ್ದಾರೆ. ಆದರೆ ಜಗತ್ತಿನಲ್ಲಿಯೇ ನಮ್ಮ ಸಂಸ್ಕೃತಿ, ಪರಂಪರೆ ಅತ್ಯಂತ ಮಹತ್ವದಾಗಿದೆ. ಕಾರಣ ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ಜಾನಪದ ಕಲೆಯ ಅರಿವು ಮೂಡಿಸುವ ಕಾರ್ಯ ಮಾಡುವುದರ ಜತೆಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕೃತಿಯ ಮಹತ್ವ ತಿಳಿದುಕೊಳ್ಳುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಪಾಶ್ಚಿಮತ್ಯ ಸಂಸ್ಕೃತಿ ಮಾರು ಹೋಗದ ನಮ್ಮ ಸಂಸ್ಕೃತಿ ಉಳಿಸಲು ಯುವ ಜನತೆ ಮುಂದಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲï ಹಾಗೂ ಸಾಮಾಜಿಕ ಜಾಲತಾಣಗಳು ವ್ಯಾಮೋಹದಿಂದ ಹೊರಬಂದು ಓದಿನ ಕಡೆಗೆ ಗಮನ ಹರಿಸಬೇಕು. ಜತೆಗೆ ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸುವುದರಿಂದ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದರು.
ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆ ಅರಿವು ಮೂಡಿಸು ನಿಟ್ಟಿನಲ್ಲಿ ದಿನನಿತ್ಯ ಜಾನಪದ ಕೋಲಾಟ, ನೃತ್ಯ, ಗಾಯನ, ನಾಟಕ, ಬಿಸುವುದು, ಕುಟ್ಟುವುದು ಹಾಗೂ ಜಾನಪದ ವಸ್ತು ಪ್ರದರ್ಶನ, ರೈತರ ಸಲಕರಣೆ ಪ್ರದರ್ಶನ, ಹಳೆಯ ಕಾಲದ ಆಹಾರ ಸೇರಿ ಜಾನಪದ ಸಂಸ್ಕೃತಿ ಬಿಂಬಿಸುವ ಕಲೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಾರಿತೋಷಕ ಪಡೆದ ತಂಡಗಳಿಂದ ಕಲಾ ಪ್ರದರ್ಶನ ಜರುಗಿತು.
ಕಾಲೇಜಿನಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಬಂಡಿ ಸೇರಿ ಜಾನಪದ ಶೈಲಿಯಲ್ಲಿ ಉಡುಗೆ ತೊಡುಗೆ ಧರಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಂದ ಕುಂಭ ಕಳಸ ಹೊತ್ತ ಭವ್ಯ ಮೆರವಣಿಗೆ ನಡೆದು ನೋಡುಗರ ಕಣ್ಮನ ಸೆಳೆಯಿತು.
ಖ್ಯಾತ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಪ್ರಾಚಾರ್ಯ ಡಾ.ಅಪರ್ಣಾ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಶಂಕರ ತರನಳ್ಳಿ, ಡಿ.ಸಿ.ಬಿರಾದಾರ, ಗಿರೀಶ ತುಂಬಾ, ಸಂತೋಷ ನಾವದಗಿ, ಉಷಾರಾಣಿರೆಡ್ಡಿ, ಕರಣ ಜಾನವೀರ, ಸಿಬ್ಬಂದಿ ಡಾ.ನಂದಾ ವಾರದ, ಡಾ. ಶಾಂತಕುಮಾರ ಬನಗುಂಡಿ ಇತರರಿದ್ದರು. ಅರುಣಕುಮಾರ ಚಂದನ ಸ್ವಾಗತಿಸಿದರು. ಡಾ. ಪ್ರಹ್ಲಾದ ಚಂಗಟೆ ನಿರೂಪಣೆ ಮಾಡಿದರು. ಡಾ.ದಿಲೀಪ ಪತಂಗೆ ವಂದಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳದ ಕೊರೆತೆ ಇರುವ ಕಾರಣ ೫ ಎಕರೆ ಭೂಮಿ ಮಂಜೂರು ಮಾಡಲು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಿ ಭೂಮಿ ಮಂಜೂರು ಮಾಡಲು ಕೋರಲಾಗಿದೆ.
| ಡಾ. ಸಿದ್ದಲಿಂಗಪ್ಪ ಪಾಟೀಲ್ ಶಾಸಕ