ಚನ್ನಪಟ್ಟಣ: ಜಾಗತೀಕರಣ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯ ಮಧ್ಯೆಯೂ ಗ್ರಾಮೀಣ ಪ್ರತಿಭೆಗಳಿಂದ ಜನಪದ ಸಂಸ್ಕೃತಿ ಜೀವ ಉಳಿಸಿಕೊಂಡಿದೆ ಎಂದು ಹಿರಿಯ ಜಾನಪದ ಕಲಾವಿದ ಚೌ.ಪು.ಸ್ವಾಮಿ ತಿಳಿಸಿದರು.
ತಾಲೂಕಿನ ಗೆಂಡೆಕಟ್ಟೆದೊಡ್ಡಿಯಲ್ಲಿ ಭಾನುವಾರ ಜಿಲ್ಲಾ ಲೇಖಕರ ವೇದಿಕೆಯಿಂದ ಆಯೋಜಿಸಿದ್ದ ಅಂಧ ಜಾನಪದ ಗಾಯಕ ರಾಂಪುರ ಮರಿಯಯ್ಯ ಹಾಗೂ ಬುಡುಬುಡಿಕೆ ಕಲಾವಿದ ಗೆಂಡೆಕಟ್ಟೆದೊಡ್ಡಿ ಪಾಪಣ್ಣ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಜಾನಪದ ಸಂಸ್ಕೃತಿಯನ್ನು ಹಲವು ಕಲಾವಿದರು ನಿರಂತರವಾಗಿ ಪಸರಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ. ಎಲೆಮರೆಕಾಯಿಯಂತೆ ಕಲಾಸೇವೆ ಮಾಡುತ್ತಿರುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆ ಉತ್ತಮ ಕಾರ್ಯಕ್ರಮ ರೂಪಿಸಿದೆ ಎಂದರು.
ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಜಾನಪದ ಕಲಾವಿದರನ್ನು ಉಳಿಸಿಕೊಳ್ಳುವುದು ಯುವ ಸಮುದಾಯದ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಸಲುವಾಗಿ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತಿಳಿಸಿದರು.ಜಿಲ್ಲಾ ಲೇಖಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಅಮೃತ ವಿಕಲಚೇತನ ಸಂಸ್ಥೆಯ ರಮೇಶ್ ಮತ್ತಿತರರಿದ್ದರು.