ಕರ್ನಾಟಕ ಜಾನಪದ. ಪರಿಷತ್ತು ಬೇಲೂರು ತಾಲೂಕು ಘಟಕ, ರೋಟರಿ ಕ್ಲಬ್ ಹಾಗೂ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯರು. 
ಜಿಲ್ಲೆ

ಜಾನಪದ ಉಳಿಸಿ ಬೆಳೆಸಲು ಮುಂದಾಗಿ

ಬೇಲೂರು: ಜಾನಪದ ಸಾಹಿತ್ಯಕ್ಕೆ ಡಾ.ಎಸ್.ಕೆ. ಕರೀಂಖಾನ್ ಅವರ ಕೊಡುಗೆ ಅಪಾರವಾಗಿದ್ದು, ಅದನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಯುವ ಜನತೆ ಮುಂದಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಹಾಸನ ಜಿಲ್ಲಾಧ್ಯಕ್ಷ ಹಂಪನಹಳ್ಳಿ ಡಾ.ತಿಮ್ಮೇಗೌಡ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲೂಕು ಘಟಕ, ರೋಟರಿ ಕ್ಲಬ್ ಹಾಗೂ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪಟ್ಟಣದ ಜೆ.ಪಿ.ನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಹಿರಿಯರ ನೆನದೇವು’ ಶೀರ್ಷಿಕೆಯಡಿ ಖ್ಯಾತ ಜಾನಪದ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಡಾ.ಎಸ್.ಕೆ. ಕರೀಂಖಾನ್ ನೆನಪು, ಜಾನಪದ ಸಂಗೀತ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಾಹಿತ್ಯ ಲೋಕಕ್ಕೆ ಆಮೂಲಾಗ್ರ ಕೊಡುಗೆ ನೀಡಿದ ಕರೀಂಖಾನ್ ಅವರು ಮುಸ್ಲಿಂ ಧರ್ಮದಲ್ಲಿ ಜನ್ಮ ತಾಳಿ, ಸರ್ವರಲ್ಲಿ ಸಮನ್ವಯತೆ ಸಾಧಿಸುವ ಮೂಲಕ ಬದುಕಿನಲ್ಲಿ ಸಹೋದರತ್ವವನ್ನು ಬೆಳೆಸಿಕೊಂಡಿದ್ದವರು, ಕನ್ನಡ ಸಾಹಿತ್ಯದಲ್ಲಿ ಜಾನಪದವನ್ನು ಉಳಿಸಿ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವಿನ ಭಿನ್ನಾಭಿಪ್ರಾಯ ತಾಂಡವಾಡುತ್ತಿರುವ ಸಂದರ್ಭ ಡಾ.ಎಸ್.ಕೆ. ಕರೀಂಖಾನ್ ಅವರು ನಮಗೆ ದಾರಿ ದೀಪವಾಗಿದ್ದಾರೆ. ಆದ್ದರಿಂದಲೇ ಅವರನ್ನು ಜಾನಪದ ಜಂಗಮ ಎನ್ನಲಾಗುತ್ತದೆ. ಇಂದಿನ ಯುವ ಜನತೆ ಜಾನಪದ ಸಾಹಿತ್ಯವನ್ನು ಉಳಿಸುವುದಕ್ಕೆ ಮುಂದಾಗಬೇಕು ಎಂದರು.

ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ವೈ.ಎಸ್. ಸಿದ್ದೇಗೌಡ ಮಾತನಾಡಿ, ಸ್ವಾತಂತ್ರ್ಯ ನಂತರ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿ ಮಾಡಲು ಆಲೂರು ವೆಂಕಟರಾಯರ ಕರ್ನಾಟಕ ಏಕೀಕರಣದ ಸಂದರ್ಭ ಡಾ.ಎಸ್.ಕೆ. ಕರೀಂಖಾನ್ ಸಹ ಕೈ ಜೋಡಿಸಿ. ಕಾವೇರಿಯಿಂದ ಗೋದಾವರಿವರೆಗೂ ಕನ್ನಡ ಮಾತನಾಡುವ ಹಾಗೂ ಕನ್ನಡಿಗರು ನೆಲೆಸಿರುವ ಊರುಗಳಿಗೆ ಭೇಟಿ ನೀಡಿ ಕನ್ನಡಿಗರ ಅಸ್ಮಿತೆಯನ್ನು ಜಾಗೃತಗೊಳಿಸಿ ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದವರು. ಈ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದರೂ ಅದನ್ನು ಲೆಕ್ಕಿಸದೆ ಕನ್ನಡ ತಾಯಿಯ ಸೇವೆಗಾಗಿ ತಮ್ಮನ್ನ ತಾವು ಸಂಪೂರ್ಣ ಅರ್ಪಿಸಿಕೊಂಡರು. ಕರೀಂಖಾನ್ ಅವರ ಸಾಧನೆ ಅಗಮ್ಯವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಜಾನಪದ ಕಾರ್ಯಕ್ರಮವನ್ನು ಬೇಲೂರಿನಲ್ಲಿ ನಡೆಸುವುದಾಗಿ ತಿಳಿಸಿದರು.
ಸುರಭಿ ಫೌಂಡೇಷನ್ ಅಧ್ಯಕ್ಷೆ ಸುರಭಿ ರಘು, ಪುರಸಭಾ ಸದಸ್ಯೆ ತೀರ್ಥಕುಮಾರಿ, ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣ, ಚಿನ್ನೇನಹಳ್ಳಿ ಸ್ವಾಮಿ, ಮೌಂಟ್ ಕಾರ್ಮೆಲ್ ಶಾಲೆ ಸಂಚಾಲಕ ಫಾದರ್ ಜೋಸೆಫ್, ಉಪನ್ಯಾಸಕ ಧನಂಜಯ, ಶಿಕ್ಷಕ ಕುಮಾರಸ್ವಾಮಿ, ಬಿ.ಎಚ್.ಸುಲೇಮಾನ್ ಇತರರಿದ್ದರು.