ಅರಕಲಗೂಡು: ಆಧುನಿಕ ಜೀವನ ಶೈಲಿಯ ಭರಾಟೆಗೆ ಸಿಲುಕಿ ಕಣ್ಮರೆಯಾಗುತ್ತಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸಲು ಸರ್ಕಾರ ಜಾನಪದ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಜತೆಗೆ, ಶಾಲಾ- ಕಾಲೇಜುಗಳ ಪಠ್ಯದಲ್ಲಿ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಖ್ಯಾತ ಜಾನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಆಗ್ರಹಿಸಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಮಂಗಳವಾರ ಜಾನಪದ ಗಾಯನ ಮತ್ತು ವಿಶ್ಲೇಷಣೆ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೋವು ಹಾಗೂ ಸಂಕಟದ ಒಡಲಲ್ಲಿ ಹುಟ್ಟಿಬಂದ ಜಾನಪದ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿ ಬೇರು. ಇದನ್ನು ಕಳೆದುಕೊಂಡರೆ ನಮ್ಮ ಸಂಸ್ಕೃತಿಯೇ ನಶಿಸಿ ಹೋಗುತ್ತದೆ. ಜಾಗತೀಕರಣಕ್ಕೆ ಜಾನಪದ ಸವಾಲಾಗಿ ರೂಪುಗೊಳ್ಳಬೇಕು. ಜಾನಪದ ಸಾಹಿತ್ಯ ಬೋಧನೆ ಕುರಿತಂತೆ ಶಿಕ್ಷಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಿದಾಗಲಷ್ಟೆ ಇದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸಮ್ಮೇಳನದ ವೇದಿಕೆ ಮೂಲಕ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶ್‌ಗೌಡ, ಆಧುನಿಕ ಜಗತ್ತಿನ ಬಹಳಷ್ಟು ಪರಿಕಲ್ಪನೆಗಳು ಹಾಗೂ ವಿಜ್ಞಾನದ ಆವಿಷ್ಕಾರಗಳಿಗೆ ಜಾನಪದವೇ ಮೂಲ ಪ್ರೇರಣೆಯಾಗಿದೆ. ನಾಗರಿಕ ಬದುಕು ಸಂಕಷ್ಟದತ್ತ ಸಾಗುತ್ತಿದೆ. ಬದುಕಿನ ಸತ್ಯಗಳನ್ನು ಕಂಡುಕೊಳ್ಳಬೇಕಿದ್ದರೆ ಮತ್ತೆ ಜಾನಪದ ಬದುಕಿನತ್ತ ಮರಳುವುದು ಅನಿವಾರ್ಯವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಆರ್ ಕೆ.ಪದ್ಮನಾಭ ಮಾತನಾಡಿ, ಜಾನಪದಕ್ಕೆ ಎಂದೂ ಸಾವಿಲ್ಲ. ಇದರ ಬೇರುಗಳು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಇಳಿದಿದ್ದು ಪ್ರಪಂಚ ಇರುವವವರೆಗೂ ಇದು ಇರುತ್ತದೆ. ನಮ್ಮ ಸಾಹಿತ್ಯ ಸಂಗೀತ ಎಲ್ಲಕ್ಕೂ ಜಾನಪದವೇ ಮೂಲವಾಗಿದೆ. ಸಂಗೀತಕ್ಕೆ ಯಾವುದೇ ಜಾತಿ, ಮತಗಳ ಭೇದವಿಲ್ಲ, ಸಮಾನತೆಯನ್ನು ಸಾರುವ ಏಕೈಕ ಕ್ಷೇತ್ರ ಸಂಗೀತ. ಮಕ್ಕಳ ಶಿಕ್ಷಣದಲ್ಲಿ ಸಂಗೀತವನ್ನು ಅಳವಡಿಸಿದಾಗ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ನುಡಿದರು.
ಗಾಯಕರಾದ ವಾಣಿ ನಾಗೇಂದ್ರ, ಕುಮಾರ್ ಕಟ್ಟೆ ಬೆಳಗುಲಿ, ದೇವಾನಂದ ವರಪ್ರಸಾದ್ ಹಾಡಿದ ಜಾನಪದ ಗೀತೆಗಳನ್ನು ನಿವೃತ್ತ ಪ್ರಾಂಶುಪಾಲ ಟಿ.ಎಚ್. ಅಪ್ಪಾಜಿಗೌಡ, ಪ್ರಾಧ್ಯಾಪಕರಾದ ಎಂ.ಕೆ. ಮಹೇಶ್, ಡಾ ಎನ್. ಸಿ .ರವಿ ವಿಶ್ಲೇಷಣೆ ಮಾಡಿದರು.
ತಾಪಂ ಇಒ ಗಿರಿಧರ್, ಬಿಇಒ ದೇವರಾಜ್, ಪ್ರಾಂಶುಪಾಲೆ ಡಿ.ಕೆ. ತಾರಾದೇವಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್ ಉಪಸ್ಥಿತರಿದ್ದರು.