ಗೋಣಿಕೊಪ್ಪಲು: ಕಟ್ಟೆಮಾಡು ದೇವಾಲಯಕ್ಕೆ ಸಾಂಪ್ರದಾಯಿಕ ಉಡುಪು ಧರಿಸಿ ಪ್ರವೇಶಕ್ಕೆ ನಿರಾಕರಿಸಿದ್ದನ್ನು ಖಂಡಿಸಿ ಕೊಡವ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಘಟನೆಯನ್ನು ಖಂಡಿಸಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಪೊನ್ನಂಪೇಟೆಯಿಂದ ಕಟ್ಟೆಮಾಡುವಿಗೆ ಶಾಂತಿಯುತ ವಾಹನ ಜಾಥಾ ಹೊರಡಲು ಅಣಿಯಾಗುತ್ತಿದ್ದ ಸಂದರ್ಭ ಬೆಳಗ್ಗೆ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಮನೆಗೆ ಪೊಲೀಸರು ತೆರಳಿ ಅವರನ್ನು ಪೊನ್ನಂಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು. ಜಾಥಾ ಹೊರಡದಂತೆ ಅಧಿಕಾರಿಗಳು ಮನವಿ ಮಾಡಿದರು.
ವಿಷಯ ತಿಳಿಯುತ್ತಿದ್ದಂತೆ ಜಾಥಾ ಹೊರಟವರು ಪೊನ್ನಂಪೇಟೆ ಪೊಲೀಸ್ ಠಾಣೆ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ನಾವು ಶಾಂತ ರೀತಿಯಲ್ಲಿ ತೆರಳಿ ಬರುತ್ತೇವೆ ಎಂದು ಪ್ರತಿಭಟನಾಕಾರರು ಮನವಿ ಮಾಡಿದರೂ ಪೊಲೀಸರು ಒಪ್ಪಲಿಲ್ಲ. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಸ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪಿರಿಯಾಪಟ್ಟಣ ಮೂಲಕ ಕುಶಾಲನಗರಕ್ಕೆ ಕರೆತಂದು ಸಂಜೆ ಪೊನ್ನಂಪೇಟೆಯಲ್ಲಿ ಬಿಡುಗಡೆ ಮಾಡಿದರು.
ಜಾಥಾ ಹೊರಟವರನ್ನು ಬಂಧಿಸಿದ ಕ್ರಮ ಖಂಡಿಸಿ ಪೊನ್ನಂಪೇಟೆ, ಹುದಿಕೇರಿ, ತಿತಿಮತಿ ಮತ್ತು ಗೋಣಿಕೊಪ್ಪಲುವಿನಲ್ಲಿ ಕೊಡವ ಸಂಘಟನೆಗಳು ಕೆಲಕಾಲ ರಸ್ತೆ ತಡೆ ನಡೆಸಿದವು.ಗೋಣಿಕೊಪ್ಪಲುವಿನಲ್ಲಿ ಗೋಣಿಕೊಪ್ಪಲು ಕೊಡವ ಸಮಾಜ ಮತ್ತು ಇಗ್ಗುತಪ್ಪ ಕೊಡವ ಸಮಾಜ ಸೇರಿದಂತೆ ಇತರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸ್ವಯಂಪ್ರೇರಿತವಾಗಿ ಬೆಂಬಲ್ ನೀಡಿದವು.
ಘಟನೆ ಸಂಬಂಧಿಸಿದಂತೆ ಮುಂದಿನ ಒಂದು ವಾರದೊಳಗೆ ಕೊಡವರನ್ನು ಇದೇ ದೇವಸ್ಥಾನಕ್ಕೆ ಜಿಲ್ಲಾಡಳಿತ ರಕ್ಷಣೆಯಲ್ಲಿಯೇ ಕರೆದುಕೊಂಡು ಹೋಗಬೇಕು. ಕಟ್ಟೆಮಾಡು ಘಟನೆಯಲ್ಲಿ ಕೊಡವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶಾಂತಿ ಸಭೆ ನಡೆದಿದ್ದು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದೂಡಲಾಗಿದೆ ಎಂದು ಪ್ರಮುಖರಾದ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.