ಜಿಲ್ಲೆ

ಜಾತ್ರೆಯೊಳಗೆ ಕಾಮಗಾರಿ ಪೂರ್ಣಗೊಳಿಸಲಿ

ಕಂಪ್ಲಿ: ಪಟ್ಟಣದ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಶ್ರೀ ಪೇಟೆ ಬಸವೇಶ್ವರ ಜಾತ್ರೆ ನ.30ರಂದು ನಡೆಯಲಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಡುವಿನ ಮಸೀದಿಯಿಂದ ಜೋಗಿ ಕಾಲುವೆ ತನಕ ರಸ್ತೆ ಎಡ ಭಾಗದಲ್ಲಿ 75, ಬಲಭಾಗದಲ್ಲಿ 60 ಮನೆಗಳಿದ್ದು, ರಸ್ತೆ ಮಧ್ಯಭಾಗದಿಂದ ಎರಡೂ ಬದಿ 17.5ಅಡಿ ರಸ್ತೆ ವಿಸ್ತರಣೆ ಕಾಮಗಾರಿ 2025ರ ಏ.12ರಂದು ಆರಂಭಗೊಂಡಿತ್ತು. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು.

ಆದರೆ, ಕೆಲವಡೆ ಇನ್ನೂ ತೆರವು ಕಾರ್ಯ ಮುಗಿಯದ ಹಿನ್ನೆಲೆಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕಿದೆ. ಕಳೆದ ಆರು ತಿಂಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ ರಸ್ತೆ ಮೇಲೆ ಓಡಾಡುವುದು ಕಷ್ಟವಾಗಿದೆ. ಜಾತ್ರೆ ಬರುವುದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಿವಾಸಿಗಳಾದ ಎಂ.ಮಂಜುನಾಥ, ವಿ.ಸಂದೀಪ್, ಅಡಿವೆಯ್ಯಸ್ವಾಮಿ, ಚಂದ್ರಶೇಖರ, ಸಂದೀಪ್, ಬಾಳೆಕಾಯಿ ಗಣೇಶ್ ಇತರರು ಒತ್ತಾಯಿಸಿದ್ದಾರೆ.