ಹಾಸನ: ಪ್ರತಿವರ್ಷ ನಡೆಯುವ ರಾಮನಾಥಪುರದ ಸುಬ್ರಹ್ಮಣೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಬೀದಿ ಬದಿ ವ್ಯಾಪರಸ್ಥರಿಗೆ ಹೆಚ್ಚಿನ ಶುಲ್ಕವನ್ನು ನಿಗದಿ ಮಾಡಿದ್ದು ಇದನ್ನು ರದ್ದು ಮಾಡುವಂತೆ ಒತ್ತಾಯಿಸಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸ್ವಾಮಿಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಪ್ರತಿನಿತ್ಯ ಬೀದಿಬದಿ ವ್ಯಾಪಾರ ಮಾಡಿಕೊಂಡು ಬರುತ್ತೇವೆ. ಜಾತ್ರೆ ಹರಾಜು, ಶುಲ್ಕಗಳನ್ನು ದಿಢೀರನೇ ಹೆಚ್ಚು ಮಾಡಿ ಹರಾಜು ಮಾಡಲು ಮುಂದಾಗಿದ್ದಾರೆ. ಟೆಂಡರ್ ಮೂಲಕ ಎರಡು ಮೂರು ಸಾವಿರ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಜಾತ್ರೆ ಹರಾಜನ್ನು ಬೀದಿ ವ್ಯಾಪಾರಸ್ಥರಿಗೆ ವಿಧಿಸದೇ ರದ್ದು ಮಾಡಬೇಕು ಎಂದು ಮನವಿ ಮಾಡಿದರು.
ನಮ್ಮ ಬಳಿ ಇರುವ ಐಡಿ ಕಾರ್ಡ್‌ದಾರರಿಗೆ ದಿನನಿತ್ಯ ವ್ಯಾಪಾರ ಮಾಡಲು ಅವಕಾಶ ನೀಡಿ, ಯಾವ ತೊಂದರೆ ನಮಗೆ ಕೊಡಬಾರದು. ಈ ಬಗ್ಗೆ ಮೊದಲೆ ಒಂದು ಬಾರಿ ಮನವಿ ಕೊಡಲಾಗಿತ್ತು. ಅದಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಮತ್ತೊಮ್ಮೆ ಮನವಿ ಕೊಡಲು ಬಂದಿದ್ದೇವೆ. ರಾಮನಾಥಪುರ ವೃತ್ತದ ಬಳಿ ಕಳೆದ 16 ವರ್ಷಗಳಿಂದಲೂ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಜಾತ್ರೆ ನಡೆಯುವುದು ಒಂದು ಕಿಲೋ ಮೀಟರ್ ದೂರದಲ್ಲಿ. ಆದರೆ ನಮ್ಮ ಬಳಿಗೆ ಬಂದು ಮೂರು ಸಾವಿರ, 8 ಸಾವಿರ ರೂ. ಕೊಡಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಹಣ ಕೊಡದಿದ್ದರೇ ಈ ಜಾಗದಲ್ಲಿ ವ್ಯಾಪಾರ ಮಾಡಲು ನಿಮಗೆ ಅವಕಾಶ ಕೊಡುವುದಿಲ್ಲ. ಬೇರೆ ಅಂಗಡಿ ಹಾಕಲು ಅವಕಾಶ ಕೊಡುವುದಾಗಿ ಎದುರಿಸುತ್ತಿದ್ದಾರೆ. ಜಾತ್ರೆ ನಡೆಯುವ ಒಂದು ತಿಂಗಳಿಗೆ ಇಷ್ಟೊಂದು ಹಣ ಹೇಗೆ ಕೊಡುವುದು? ನಾವು ಬಡ ಜೀವಿಗಳು, ಪ್ರತಿನಿತ್ಯ ದುಡಿದು ಊಟ ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಇದೆ ವೇಳೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ರವಿ, ಜಿಲ್ಲಾಧ್ಯಕ್ಷ ಚೇತನ್, ರಾಜೇಗೌಡ, ಹೀನಾ, ಭಾರತಿ, ಲಕ್ಷ್ಮಮ್ಮ, ಫಾತೀಮಾ, ಜ್ಯೋತಿ, ಅಶ್ವಥ್, ಕುಮಾರ್ ಇತರರು ಉಪಸ್ಥಿತರಿದ್ದರು.