ಉಳ್ಳಾಗಡ್ಡಿ-ಖಾನಾಪುರ: ಗ್ರಾಮಸ್ಥರಲ್ಲಿನ ಒಗ್ಗಟ್ಟು, ಭಕ್ತಿ ಹೆಚ್ಚಿಸುವ ಉದ್ದೇಶದಿಂದ ಮುಕ್ತವಾಗಿ ಹಿರಿಯರು ಜಾತ್ರೆಗಳನ್ನು ಹಮ್ಮಿಕೊಂಡು ಬರುತ್ತಿದ್ದರು. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಶ್ರೀ ಮಾಟ ಬಸವಣ್ಣ ದೇವರ ಜಾತ್ರೆ ಉಳ್ಳಾಗಡ್ಡಿ-ಖಾನಾಪುರ ಭಕ್ತರ ಭಕ್ತಿ ಅನಾವರಣಗೊಳಿಸಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಮಾಟ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಸಮರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸತ್, ಚಿತ್, ಆನಂದದಿಂದ ಆತ್ಮ ಸ್ವರೂಪನಾಗಿದ್ದಾನೆ. ದೇಶವನ್ನು ಉಚ್ಛಾಯ ಸ್ಥಿತಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಧರ್ಮದೊಂದಿಗೆ ದೇಶಾಭಿಮಾನ ಅಗತ್ಯವಾಗಿದೆ. ಪರಧರ್ಮ ಸಹಿಷ್ಣುತೆಯನ್ನು ಕಾಪಾಡಿ ಜಾತಿ, ಮತ, ಪಂಥ ಬೇಧಗಳನ್ನು ಅಳಿಸಿ ಬದುಕು ಸುಂದರವಾಗಿಸುವತ್ತ ಭಕ್ತರು ನಡೆಯಬೇಕು. ಸಿದ್ಧೇಶ್ವರ ಶ್ರೀಗಳು ಹೃದಯವಂತಿಕೆ, ಜ್ಞಾನದಲ್ಲಿ ದೊಡ್ಡವರು. ಅವರ ಕೃಪಾಶೀರ್ವಾದ ಹಾಗೂ ನೂಲದ ಶ್ರೀಗಳ ಮಾರ್ಗದರ್ಶನದಲ್ಲಿ ಇಂಥ ಧರ್ಮಾಚರಣೆ ಕಾರ್ಯಕ್ರಮ ನಡೆದಿರುವುದು ವಿಶೇಷ. ಈಶ್ವರ ದೇವಸ್ಥಾನದ ಮೂಲವೇ ನಂದಿ ಮೂರ್ತಿ ಆದ್ದರಿಂದ ನಂದಿ ಬಸವಣ್ಣ ದೇವರು ಕೂಡಾ ಶ್ರೇಷ್ಠ ಎಂದು ತಿಳಿಸಿದರು.
ಭವ್ಯ ಮೆರವಣಿಗೆ: ಶ್ರೀ ಮಾಟ ಬಸವಣ್ಣ ದೇವರ ಜಾತ್ರೆ ನಿಮಿತ್ತ ಜರುಗಿದ ಜಗದ್ಗುರುಗಳ ಸಾರೋಟ ಮೆರವಣಿಗೆಯು ಸುಮಂಗಲೆಯರ ಕುಂಭೋತ್ಸವ, ಕರಡಿ ಮಜಲು, ಡೊಳ್ಳು ವಾದ್ಯ ಸೇರಿ ವಿವಿಧ ವಾದ್ಯಮೇಳಗಳ ನಡುವೆ ಅದ್ದೂರಿಯಾಗಿ ನಡೆಯಿತು. ಅಶ್ವ ಮೆರವಣಿಗೆ, ಇಲೆಕ್ಟ್ರಿಕ್ ಆನೆ, ಗೊಂಬೆಕುಣಿತ, ಜಯಘೋಷ ನಡೆಯಿತು. ಬಿಸಿಲು ಲೆಕ್ಕಿಸದೇ ಅಪಾರ ಜನಸ್ತೋಮ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಉಳ್ಳಾಗಡ್ಡಿ-ಖಾನಾಪುರದ ಶ್ರೀಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನೂಲ ಸುರಗೀಶ್ವರ ಮಠದ ಶ್ರೀಗುರುಸಿದ್ಧೇಶ್ವರ ಸ್ವಾಮೀಜಿ, ಪಾಶ್ಚಾಪುರ ಕುಂದರಗಿಯ ಶ್ರೀವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಇಳಕಲ್ಲನ ಶ್ರೀಅನ್ನದಾನ ಶಾಸಿ, ಶ್ರೀಸಿದ್ದಲಿಂಗಯ್ಯ ಶಾಸಿ, ಗದಗದ ವೀರಭದ್ರ ಬೆನಕಲ್, ಬಸ್ಸಾಪುರ ಗವಿಮಠದ ಗವಿಸಿದ್ಧೇಶ್ವರ ಅಪ್ಪಾಜಿ, ಸಂಜಯ ಶಾಸಿ, ನಾಗಯ್ಯ ತೇರಣಿಮಠ, ಮಾಟ ಬಸವಣ್ಣ ದೇವರ ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.