ಜಿಲ್ಲೆ

ಜಾತ್ರಾ ವಿಶೇಷ ಬಸ್ ಟಿಕೆಟ್ ದರ ಹೆಚ್ಚಿಸಬೇಡಿ

ಭಟ್ಕಳ: ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾದೇವಿ ಜಾತ್ರೆಗೆ ಓಡಿಸುವ ಜಾತ್ರಾ ವಿಶೇಷ ಬಸ್​ಗಳಿಗೆ ಟಿಕೆಟ್ ದರ ಹೆಚ್ಚಿಸದಂತೆ ಭಟ್ಕಳ ವಿಶ್ವ ಹಿಂದು ಪರಿಷತ್ (ವಿಹಿಂಪ) ಹಾಗೂ ಭಜರಂಗದಳ ಘಟಕದಿಂದ ರಾಜ್ಯ ಸಾರಿಗೆ ಸಚಿವರಿಗೆ ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ಬುಧವಾರ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧ ಜಾತ್ರೆಯಾಗಿರುವ ಶಿರಸಿ ಶ್ರೀ ಮಾರಿಕಾಂಬಾದೇವಿ ಜಾತ್ರೆ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ಜರುಗಲಿದೆ. ಶ್ರೀ ಮಾರಿಕಾಂಬಾದೇವಿ ಜಾತ್ರೆ ಪ್ರಯುಕ್ತ ಜನರಿಗೆ ಅನುಕೂಲ ಮಾಡಿಕೊಡಲು ವಿವಿಧ ಡಿಪೋಗಳಿಂದ ವಿಶೇಷ ಬಸ್​ಗಳನ್ನು ಶಿರಸಿಗೆ ಬಿಡಲಾಗುತ್ತದೆ. ಆದರೆ, ಜಾತ್ರಾ ವಿಶೇಷ ಬಸ್​ಗೆ

ಹಾಲಿ ಇರುವ ದರಕ್ಕಿಂತ ಹೆಚ್ಚು ದರ ಆಕರಣೆ ಮಾಡಲಾಗುತ್ತಿದೆ. ಇದು ಜಾತ್ರೆಗೆ ತೆರಳುವ ಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಬರುವ ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ. ಇದು ಖಾಸಗಿ ಬಸ್, ಇತರ ವಾಹನದವರು ಹೆಚ್ಚುವರಿ ವಸೂಲಿ ಮಾಡಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ಹೆಚ್ಚುವರಿ ದರ ವಸೂಲಿ ಮಾಡಬಾರದು ಎಂಬ ಮನವಿ ಪತ್ರವನ್ನು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಭಟ್ಕಳ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಯ ಉಷಾ ಅವರಿಗೆ ಸಲ್ಲಿಸಿದರು.

ವಿಶ್ವ ಹಿಂದು ಪರಿಷತ್ ಪ್ರಮುಖ ಶಂಕರ ಶೆಟ್ಟಿ, ರಾಮನಾಥ ಬಳಗಾರ, ಶಿವರಾಮ ನಾಯ್ಕ, ಗಣಪತಿ ಆಚಾರಿ, ಸುರೇಶ ಆಚಾರಿ, ದೀಪಕ ನಾಯ್ಕ, ಎಸ್.ಎಂ. ನಾಯ್ಕ, ಸುರೇಂದ್ರ ಭಟ್ಕಳಕರ, ಸುಧಾಕರ ಮಹಾಲೆ, ವಾಮನ ಶೇಟ್ ಇತರರು ಇದ್ದರು.