ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಮೃತ್ಯುಂಜಯನಗರ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ. ಆಧುನಿಕ ಜೀವನದಲ್ಲಿ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಕಷ್ಟ ಪಡುತ್ತಿರುವ ಸಮಯದಲ್ಲಿ ಸಾಮೂಹಿಕ ವಿವಾಹಗಳು ಅತೀ ಅವಶ್ಯಕ ಎಂದರು.
ಶಿರಕೋಳದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ದಾಂಪತ್ಯ ಜೀವನದಲ್ಲಿ ಸತಿ-ಪತಿಗಳು ಚಕ್ಕಡಿ ಗಾಲಿಗಳಿದ್ದಂತೆ. ಹೊಂದಾಣಿಕೆ ಜೀವನ ಮುಖ್ಯ. ಸಮರಸವೇ ಜೀವನ, ಅತ್ತೆಯನ್ನು ತಾಯಿಯಂತೆ, ಸೊಸೆಯನ್ನು ಮಗಳಂತೆಯೂ ಕಾಣಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಸುಮಾರು 14 ವರ್ಷಗಳಿಂದ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದು, ಭಕ್ತರ ಸಹಾಯ, ಸಹಕಾರ ಹಾಗೂ ಶ್ರೀಗಳ ಆಶೀರ್ವಾದವೇ ಕಾರಣ ಎಂದರು.
ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಸಿದ್ದಪ್ಪ ಕರಡಿಗುಡ್ಡ, ಈಶ್ವರ ಮಾಲಗಾರ, ಮಹಾಂತೇಶ ಕುರಟ್ಟಿದೇಸಾಯಿ, ಸುರೇಶ ಅರಕೇರಿ, ಮಹಾಂತೇಶ ಗೊರವನಕೊಳ್ಳ, ಸೋಮಣ್ಣ ಗೋಡಿಕಟ್ಟಿ, ಶಿವಯೋಗಿ ಹಂಚಿನಾಳ, ಶಿವನಗೌಡ ಪಾಟೀಲ, ಗುರುಸಿದ್ದಪ್ಪ ಭಾವಿಕಟ್ಟಿ, ಪ್ರಭು ಕಲ್ಲಾಪುರ, ಬಸವರಾಜ ಹಡಗಲಿ, ಸದಾನಂದ ಗೋಡಿ, ಭಕ್ತರು, ಇತರರು ಇದ್ದರು.