ಹುಲ್ಲೇಶ್ವರ ಜಾತ್ರಾ ಮಹೋತ್ಸವ. 
ಜಿಲ್ಲೆ

ಜಾತ್ರಾ ಮಹೋತ್ಸವ ಸಂಭ್ರಮ

ಬಾಗಲಕೋಟೆ: ಹುಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಹಾಗೂ ಕಳಸಗಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಯ ಮಾರ್ಗವಾಗಿ ಬಹಳ ವಿಜೃಂಭಣೆಯಿ0ದ ನಡೆಯಿತು.

ಗುಡೂರ ಎಸ್ ಸಿ ಗ್ರಾಮದ ಹುಲ್ಲೇಶ್ವರ ಜಾತ್ರೆಯ ಪ್ರಯುಕ್ತ ಧಾರ್ಮಿಕ ಸಂಪ್ರದಾಯದ ಪೂಜಾ ಕಾರ್ಯಗಳ ನಂತರ ಪಲ್ಲಕ್ಕಿ ಹಾಗೂ ಕಳಸಗಳ ಮೆರವಣಿಗೆ ನಡೆಯಿತು. ಪೂಜ್ಯ ಮಳ್ಳಯ್ಯಜ್ಜನವರ ಸಾನಿಧ್ಯದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರದ ಪೂಜಾರಿ ಮನೆತನದಿಂದ ಕಳಸದ ಮೆರವಣಿಗೆ ಆರಂಭವಾಯಿ ಪ್ರಮುಖ ರಸ್ತೆಯ ಮಾರ್ಗವಾಗಿ ಸಾಗಿ ಹುಲ್ಲೇಶ್ವರ ದೇವಾಲಯ ತಲುಪಿದ ನಂತರ ಕಳಸಾರೋಹನ ಕಾರ್ಯ ನೆರವೇರಿಸಲಾಯಿತು.

ಮಳ್ಳಯ್ಯಜ್ಜನವರ ಸಾನಿಧ್ಯದಲ್ಲಿ ಗ್ರಾಮದ ಯುವ ಪ್ರತಿಭೆ ಪರಶು ಬೋವಿ ನಿರ್ದೇಶನ, ಕರವೀರಪ್ಪ ಯರಕದ, ಗಂಗಾಧರ ಬಡಿಗೇರ, ಶರಣಪ್ಪ ಹಡಪದ, ಕಾರ್ತಿಕ ಕುಂಬಾರ ನಟಿಸಿ ಮೂಡಿ ಬರಲಿರುವ ಹುಲ್ಲೇಶ್ವರ ಮಹಾತ್ಮೆ ಚಲನಚಿತ್ರದ ಕಿರು ಚಿತ್ರಣ ಬಿಡುಗಡೆ ಮಾಡಲಾಯಿತು.

ಸಂಜೆ ಮುರಡಿ ರಸ್ತೆ ಬಳಿ ಇರುವ ಸೂಚಿನ ಕಟ್ಟೆಯಲ್ಲಿ ಮಳ್ಳಯ್ಯಜ್ಜನವರು ತಮ್ಮ ಮುಳ್ಳು ಹಾವಿಗೆಯ ಮೇಲೆ ನಿಂತು ಒಳಿತು ಕೆಡಕುಗಳ ಸೂಚು ಮಾಡಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಚುಳಿಚಿನ ಪವಾಡ, ನುಡಿ ಹೇಳುವ ಜಾಗ, ಹುಲ್ಲೇಶ್ವರ ದೇವಾಲಯ ಸೇರಿದಂತೆ ಗ್ರಾಮದ ರಥ ಬೀದಿಗಳಲ್ಲಿ ಹಾಕಲಾದ ವಿದ್ಯುತ್ ದೀಪಗಳು, ಹುಲ್ಲೇಶ್ವರ ದೇವಾಲಯದ ಡೊಳ್ಳು ಕುಣಿತ ಬಳಗದಿಂದ ವಿಶೇಷ ಡೊಳ್ಳು ಮೇಳವು ಭಕ್ತರ ಗಮನ ಸೆಳೆಯಿತು. ಗ್ರಾಮದ ಹಿರಿಯರು ಯುವಕರು ಮಹಿಳೆಯರು ಭಕ್ತಾದಿಗಳು ಹಾಗೂ ಇತರರಿದ್ದರು.