ಗಂಗಾವತಿ ಅಮರಜ್ಯೋತಿ ಸಭಾಂಗಣದಲ್ಲಿ ಬಿಜೆಪಿ ವಿವಿಧ ಮೋರ್ಚಾದಿಂದ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಅಭಿವೃದ್ಧಿ ಸಂಕಲ್ಪದ ಪ್ರತಿಜ್ಞಾವಿಧಿ ಶುಕ್ರವಾರ ಕೈಗೊಳ್ಳಲಾಯಿತು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರಿದ್ದರು. 
ಜಿಲ್ಲೆ

ಜಾತ್ಯತೀತವಾಗಿ ಯೋಜನೆಗಳ ಅನುಷ್ಠಾನ

ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು, ಅಭಿವೃದ್ಧಿ ಪರ ಚಿಂತನೆಯಿಂದ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ಅಮರಜ್ಯೋತಿ ಸಭಾಂಗಣದಲ್ಲಿ ಬಿಜೆಪಿ ವಿವಿಧ ಮೋರ್ಚಾದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದರು.

11 ವರ್ಷಗಳ ನಿರಂತರ ಆಡಳಿತದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಜಾತ್ಯತೀತವಾಗಿ ಅನುಷ್ಠಾನಗೊಂಡಿವೆ. ಅಭಿವೃದ್ಧಿ ಕಾಮಗಾರಿಗಳು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿವೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವಿಕಸಿತ ಭಾರತದ ಅಮತಕಾಲದ ಧ್ಯೇಯದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಪರಿಕಲ್ಪನೆಯಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ ಎಂದರು.

ವಿವಿಧ ಕ್ಷೇತ್ರದ ಪ್ರಬುದ್ಧರ ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿನ ಯೋಜನೆಗಳ ಭಿತ್ತಿ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ಸೋಮನಾಥ ಸ್ವಾಮಿ ಕುಲ್ಕರ್ಣಿ, ಶಿವಾನಂದ ಮೇಟಿ ಉಪನ್ಯಾಸ ನೀಡಿದರು. ನಂತರ ಅಭಿವೃದ್ಧಿಯ ಸಂಕಲ್ಪ ಕೈಗೊಳ್ಳಲಾಯಿತು.

ಮಾಜಿ ಸಂಸದ ಎಸ್.ಶಿವರಾಮನಗೌಡ, ವಿಕಸಿತ ಭಾರತ ಜಿಲ್ಲಾ ಸಂಚಾಲಕ ಜಿ.ಶ್ರೀಧರ ಕೆಸರಹಟ್ಟಿ, ಕಾಡಾ ಮಾಜಿ ಅಧ್ಯಕ್ಷರಾದ ಎಚ್.ಎಸ್.ಗಿರೇಗೌಡ, ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ವೀರಭದ್ರಪ್ಪ ನಾಯಕ, ಕಾಶೀನಾಥ್ ಚಿತ್ರಗಾರ, ಚನ್ನಪ್ಪ ಮಳಗಿ, ಮನೋಹರಗೌಡ ಹೇರೂರು, ರಮೇಶ ನಾಯಕ, ಚಂದ್ರಶೇಖರ್ ಅಕ್ಕಿ, ಡಿ.ಕೆ.ಆಗೋಲಿ, ವೃತ್ತಿಪರ ಪ್ರತಿನಿಧಿಗಳಾದ ಸುಬ್ರಮಣ್ಯ ರಾಯ್ಕರ್, ಡಾ.ಶಿವಾನಂದ ಬಾವಿಕಟ್ಟಿ, ಡಾ.ಅಮರೇಶ ಪಾಟೀಲ್, ಸಿ.ಜಿ.ಜವಳಿ, ಗಾಳಿ ರುದ್ರಪ್ಪ ಇತರರಿದ್ದರು.