ಜಿಲ್ಲೆ

ಜಾತ್ಯತೀತ ಜ್ಯೋತಿ ಬೆಳಗಿಸಿದ ಮಹಾನ್ ವಚನಕಾರ

ಲಲಾಟಾಕ್ಷ ಎಸ್

ಹೊಳೆನರಸೀಪುರ: ಜಗತ್ತಿಗೆ ಮಾನವತಾ ಸಂದೇಶ ಸಾರಿದ ಶ್ರೀ ಬಸವೇಶ್ವರರು ಜಾತ್ಯತೀತ ಜ್ಯೋತಿಯನ್ನು ಬೆಳಗಿಸಿದ ಮಹಾನ್ ವಚನಕಾರ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ವಿಶ್ವಗುರು ಶ್ರೀ ಬಸವೇಶ್ವರ 892ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಸವಣ್ಣನವರು ತಮ್ಮಲ್ಲಿನ ಜ್ಞಾನವನ್ನು ಸಮಾಜಕ್ಕೆ ಕೊಡಗೆ ನೀಡಿದ್ದಾರೆ. 12ನೇ ಶತಮಾನದಲ್ಲಿಯೇ ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತ ಎಂದರೆ ಅವರು ಎಷ್ಟು ತತ್ವಜ್ಞಾನಿ ಎಂಬುದು ಅರ್ಥವಾಗುತ್ತದೆ. ಬಸವೇಶ್ವರರ ಸಂದೇಶಗಳು ಇಂದಿನ ಜನಮಾನಸದಲ್ಲಿ ಪ್ರಚಲಿತವಾಗಬೇಕು ಎಂದರು.

ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಬಸವೇಶ್ವರರು ಸಾಮಾಜಿಕ ಪರಿವರ್ತನೆಗೆ ಅನುಭವ ಮಂಟಪದ ಮೂಲಕ ಸಾಕಷ್ಟು ಶ್ರಮಿಸಿದರು. ಇಂದಿಗೂ ಸಾಮಾಜಿಕ ಹಲವು ಪಿಡುಗುಗಳು ನಿವಾರಣೆಯಾಗಿಲ್ಲ. ವಚನಗಳ ತತ್ವವನ್ನು ಪಾಲಿಸಿದರೆ ಮಾತ್ರ ಅವರಿಗೆ ನಾವು ಗೌರವ ಸೂಚಿಸಿದಂತಾಗುತ್ತದೆ. ನೆಪ ಮಾತ್ರಕ್ಕೆ ಆಚರಣೆಯಿಂದ ಅವರಿಗೆ ನಾವು ಗೌರವಿಸಿದಂತಾಗದು ಎಂದರು.

ಬಿಆರ್‌ಸಿ ನಾಗರಾಜ್, ಹಿರಿಯ ವಕೀಲ ವಸಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ಕುಮಾರ ಕುಮಾರಸ್ವಾಮಿ, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ನಾನಾ ಸಂಘ, ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.