ಮೈಸೂರು: ಸ್ವಾತಂತ್ರ್ಯ ಬಂದು 78 ವರ್ಷವಾದರೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಪ್ರಸಾದನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹನಿರ್ಮಾಣ ಸಹಕಾರ ಸಂಘದ ವತಿಯಿಂದ ಮೈಸೂರು ತಾಲೂಕಿನ ವರುಣ ಕೆರೆ ಸಮೀಪದ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಶನಿವಾರ ‘ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ವ್ಯವಸ್ಥೆ ಎಂಬುದು ಬಾವಿಯೊಳಗಿನ ಸತ್ತೆಯ ಹಾಗೆ. ಬಾವಿಗೆ ಬಿಂದಿಗೆ ಹಾಕಿದಾಗ ಸತ್ತೆ ದೂರ ಸರಿಯುತ್ತದೆ. ಬಿಂದಿಗೆ ಮೇಲೆತ್ತಿದ್ದರೆ ಸತ್ತೆ ಮತ್ತೆ ಕೂಡಿಕೊಳ್ಳುತ್ತದೆ.ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯೂ ಹೀಗೇ ಇದೆ ಎಂದರು.
ಸಮಾಜದಲ್ಲಿರುವ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾವಲಂಬನೆ ಬಂದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು ನಿರರ್ಥಕ ಎಂದು ಅಂಬೇಡ್ಕರ್ ಹೇಳಿದ್ದರು. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ ನಿರ್ಮಾಣ ಆಗಿದೆ ಎಂದು ಸಿಎಂ ಕಿಡಿಕಾರಿದರು.
ಬಸವಣ್ಣನವರು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಸೇರಿದವರಲ್ಲ. ಅವರು ವಿಶ್ವಮಾನ. ಅಸಮಾನತೆಯಿಂದ ಮುಕ್ತವಾದ ಸಮ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದರು. ಜಾತ್ಯತೀತ, ಸ್ವಾತಂತ್ರೃ, ಮೇಲು-ಕೀಳು ಎಂಬ ಭೇದಭಾವವಿಲ್ಲದೆ ಎಲ್ಲರೂ ಮನುಷ್ಯರಾಗಿ ಬಾಳಬೇಕೆಂಬ ಆಶಯ ಹೊಂದಿದ್ದರು. ಇದಕ್ಕೂ ಹಿಂದೆ ಬುದ್ಧ ಕೂಡ ಇದೇ ಪ್ರಯತ್ನ ಮಾಡಿದ್ದರು. ಆದಾಗ್ಯೂ, ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ 850 ವರ್ಷಗಳ ಹಿಂದೆಯೇ ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ ’ ಎಂದು ಹೇಳಿದ್ದರು. ಈ ವಚನ ತಿಳಿದಿರುವ ವಿದ್ಯಾವಂತರೇ ಜಾತಿವಾದಿಗಳಾಗಿದ್ದಾರೆ. ‘ನೀವು ಯಾವ ಜಾತಿ’ ಎಂದು ಕೇಳುತ್ತಾರೆ.
ಬಸವಾದಿ ಶರಣರು ಇದನ್ನು ಬಯಸಿರಲಿಲ್ಲ. ಜಾತಿ, ವರ್ಗಗಳ ನಿರ್ಮೂಲನೆಗೆ ಪಣತೊಟ್ಟು, ಎಲ್ಲರೂ ಮನುಷ್ಯರಾಗಿ ಬಾಳಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ಅನುಭವ ಮಂಟಪ ಅಸ್ತಿತ್ವಕ್ಕೆ ಬಂದಿದ್ದು. ಅಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಒದಗಿಸಿದ್ದರು. ತಳಸಮುದಾಯದ ಅಲ್ಲಮ ಪ್ರಭುವನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದರು.
ಹಿಂದೆ ಶೂದ್ರರು, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ. ಅನುಭವ ಮಂಟಪ ಜಗತ್ತಿನ ಮೊದಲನೇ ಸಂಸತ್ತು. ಇಲ್ಲಿ ಜಾತಿ, ಧರ್ಮಗಳಿರಲಿಲ್ಲ. ಎಲ್ಲ ಧರ್ಮದವರೂ ಸೇರಿ ಸಾಮಾಜಿಕ ಅನುಭವ ಕುರಿತು ಚರ್ಚೆ ಮಾಡಿ ಅದಕ್ಕೆ ರೂಪ ಕೊಡುವ ಕೆಲಸ ಮಾಡಿದ್ದರು ಎಂದು ಸಿಎಂ ಹೇಳಿದರು.
ಅನ್ಯ ಧರ್ಮ ಕುರಿತು ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಸಮ ಸಮಾಜ ನಿರ್ಮಾಣ ಮಾಡಿ ಸಹಬಾಳ್ವೆ ಢಿಸಿಕೊಳ್ಳಬೇಕು. ಬಸವಣ್ಣನವರ ಆಶಯದಂತೆ ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣ ಆಗಬೇಕು. ಎಲ್ಲರೂ ಮನುಷ್ಯರಾಗಿ ಬಾಳಬೇಕು. ಸಂವಿಧಾನದ ಆಶಯವೂ ಅದೇ- ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಸಮಾನತೆ ತೊಡೆಯುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಉದ್ದೇಶವೂ ಅದೇ ಆಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಕಳೆದ ಎರಡುವರ್ಷ ಮೂರು ತಿಂಗಳಲ್ಲಿ 1 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು. ಶಿಕ್ಷಣದಿಂದ ಮಾತ್ರ ಜ್ಞಾನದ ವಿಕಾಸ, ಸ್ವಾತಂತ್ರೃ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು ಎಂದು ಸಿಎಂ ಸಲಹೆ ನೀಡಿದರು.
ಸುತ್ತೂರು ಮಠದ ರಾಜೇಂದ್ರ ಶ್ರೀಗಳು ಅಕ್ಷರ, ಅನ್ನ ದಾಸೋಹಕ್ಕೆ ಹೆಸರಾದವರು. ದಾಸೋಹದ ಅರ್ಥ ‘ಉತ್ಪಾದಿಸುವುದು ಮತ್ತು ಹಂಚುವುದು’ ಎಂಬುದಾಗಿದೆ.
ಅವರು ಇದನ್ನು ಅರ್ಥಪೂರ್ಣವಾಗಿ ಆಚರಣೆಗೆ ತಂದರು. ಅವರು ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ರಾಜ್ಯ, ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದರು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.
ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಸಂಘದ ಅಧ್ಯಕ್ಷ ಎಲ್.ರೇವಣ ಸಿದ್ದಯ್ಯ ಇನ್ನಿತರರಿದ್ದರು.