ಜಿಲ್ಲೆ

ಜಾತಿಯ ಕೀಳರಿಮೆ ಬಿಟ್ಟರೆ ಯಶಸ್ಸು ಲಭ್ಯ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್ ಸಲಹೆ

ನೆಲಮಂಗಲ: ಜಾತಿಯ ಕುರಿತು ಕೀಳರಿಮೆ ಬೆಳೆಸಿಕೊಳ್ಳದೆ, ಧೈರ್ಯದಿಂದ ಜಾತಿಯನ್ನು ಹೇಳಿಕೊಂಡು ಬದುಕಿದಾಗ ಮಾತ್ರ ಯಶಸ್ಸು ಲಭ್ಯವಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್. ಭಾಸ್ಕರ್‌ಪ್ರಸಾದ್ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೆಲಮಂಗಲ ಮಾದಿಗ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಯಾವುದೇ ವ್ಯಕ್ತಿ ಇಂಥದ್ದೇ ಜಾತಿ ಧರ್ಮದಲ್ಲಿ ಜನಿಸಬೇಕೆಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಆದರೆ ಜನನದ ಬಳಿಕ ಜೀವಿತಾವಧಿಯ ಕೊನೆಯವರೆಗೂ ಜಾತಿ, ಧರ್ಮವನ್ನು ಅವಲಂಬಿಸಿರುತ್ತಾನೆ. ಧರ್ಮ, ಜನಾಂಗಕ್ಕೆ ನಿಯತ್ತಾಗಿ ನಡೆದುಕೊಂಡಲ್ಲಿ ಯಶಸ್ವು ಸಿಗುತ್ತದೆ ಎಂದರು.

ತಾಲೂಕಿನ ದೊಡ್ಡಕರೇನಹಳ್ಳಿ ಗ್ರಾಮದ ಅದಿಜಾಂಬವ ಮಠಕ್ಕೆ 5ಎಕರೆ ಜಾಗವನ್ನು ಮೈಸೂರು ಸಂಸ್ಥಾನದಿಂದಲ್ಲೇ ಮಂಜೂರಾಗಿದೆ. ಆದರೆ, ಕೆಲ ಪ್ರಭಾವಿಗಳು ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಲು ಸಮುದಾಯದ ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.

ದಲಿತ ಕೂಲಿ ಮತ್ತು ಕಾರ್ಮಿಕ ಸಂಘಟನೆ ಅಧ್ಯಕ್ಷ ಬಿ. ಗಂಗಬೈಲ್ಲಪ್ಪ ಮಾತನಾಡಿ, ತಾಲೂಕಿನಾದ್ಯಂತ ಇರುವ ಮಾದಿಗ ಸಮುದಾಯದವರನ್ನು ಒಗ್ಗೂಡಿಸಲು ಈಗಾಗಲೇ 2 ಸಭೆಗಳನ್ನು ಮಾಡಲಾಗಿದೆ. ಜನಾಂಗದ ವಿದ್ಯಾವಂತ ಯುವಕರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪದಾಧಿಕಾರಿಗಳು: ನೆಲಮಂಗಲ ಮಾದಿಗ ಮಹಾಸಭಾದ ತಾಲೂಕು ಗೌರವಾದ್ಯಕ್ಷರಾಗಿ ಮಾಜಿ ಸಚಿವ ಅಂಜನಮೂರ್ತಿ, ಚಲುವರಾಜು, ಅಧ್ಯಕ್ಷ ವಕೀಲ ಕನಕರಾಜು, ಉಪಾಧ್ಯಕ್ಷರಾಗಿ ಯಲ್ಲಪ್ಪ, ಹನುಮಂತಮ್ಮ, ಕಾಂತರಾಜು, ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ವಿನಯ್‌ಚಂದ್ರ, ಕಾರ್ಯದರ್ಶಿ ಡಿ.ಆರ್. ಅನಂತ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಗಂಗಾಧರ್, ಗಂಗರಾಜು, ಜೆ. ಗಂಗಾಧರ್, ಧರಣೀಶ್, ಖಜಾಂಚಿ ಪ್ರಕಾಶ್, ಕಾನೂನು ಸಲಹೆಗಾರರಾಗಿ ದೊಡ್ಡೇರಿ ಬೈಲಪ್ಪ, ವಿಜಯ್‌ಕುಮಾರ್, ಗಂಗರಾಜು, ಸಲಹೆಗಾರರಾಗಿ ಸಿ. ಸಿದ್ಧರಾಜು, ಎಚ್. ವೆಂಕಟೇಶ್ ದೊಡ್ಡೇರಿ, ನಾಗರಾಜು, ದೀಪಕ್‌ಕಿರಣ್ ನೇಮಕವಾಗಿದ್ದಾರೆ. ತಾಲೂಕಿನ 21 ಗ್ರಾಮಪಂಚಾಯಿತಿಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಬಿಎಸ್‌ಪಿ ತಾಲೂಕು ಅಧ್ಯಕ್ಷ ಮಹದೇವ್, ಮುಖಂಡರಾದ ಬೊಮ್ಮನಹಳ್ಳಿ ನಾಗರಾಜು, ಪಿ. ನಾರಾಯಣಸ್ವಾಮಿ, ನಿಡವಂದ ರಾಜು, ರಾಮಾಂಜಿನಪ್ಪ, ಶಂಕರಪ್ಪ, ಸಿ.ಎಚ್. ಸಿದ್ಧಯ್ಯ, ಕೇಶವಮೂರ್ತಿ, ಗಂಗರಾಜು, ಚಿಕ್ಕಮಾರನಹಳ್ಳಿ ದಿನೇಶ್ ಮತ್ತಿತರರು ಇದ್ದರು.