ಜಿಲ್ಲೆ

ಜಾತಿನಿಂದನೆ ಮಾಡಿದ 9 ಜನರಿಗೆ 2 ವರ್ಷ ಶಿಕ್ಷೆ

ಬೆಳಗಾವಿ: ಬೈಕ್​ ಅಪಘಾತದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ ಪರಿಶಿಷ್ಟ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸವರ್ಣಿಯರಿಗೆ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು 70,500 ರೂ. ದಂಡ ವಿಧಿಸಿದೆ.

ಬಸಪ್ಪ ಕೊಪ್ಪದ, ಫಕೀರಪ್ಪ ತೇನಗಿ, ಜ್ಞಾನೇಶ್ವರ ತೇನಗಿ, ಮುರಾರಿ ತೇನಗಿ, ಬಸವಂತಪ್ಪ ತೇನಗಿ, ರೇಣವ್ವ ದಂಡಯ್ಯಪ್ಪಗೋಲ, ಲಕ್ಕವ್ವ ಮುದ್ದನ್ನವರ, ಯಲ್ಲವ್ವ ತೇನಗಿ ಮತ್ತು ಶಿವಪ್ಪ ದಂಡಯ್ಯಪ್ಪಗೋಲ ಶಿಕ್ಷೆಗೊಳಗಾದವರು.

ಪ್ರಕರಣ ಹಿನ್ನೆಲೆ: ಮುರಗೋಡ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2017ರ ಮಾರ್ಚ್​ 10ರಂದು ಬೂದಿಗೊಪ್ಪ ಮತ್ತು ಯರಜರ್ವಿ ಗ್ರಾಮದ ಮಧ್ಯೆ ಬಸಪ್ಪ ಕೊಪ್ಪದ ಬೈಕ್​ ಮೇಲೆ ಫಕೀರಪ್ಪನ ಜತೆಗೆ ಹೊರಟಿದ್ದಾಗ ಎದುರಿನಿಂದ ಬರುತ್ತಿದ್ದ ವ್ಯಕ್ತಿಯ ಬೈಕ್​ಗೆ ಅಪಘಾತ ಮಾಡಿದ್ದನು. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು. ತದನಂತರ ದೂರುದಾರನ ಮೇಲೆ ಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಮರಗೋಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಮದುರ್ಗ ಡಿಎಸ್ಪಿ ಎಂ.ಬಿ. ನಂದಗಾವಿ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸವಿತಾಕುಮಾರಿ ಎನ್​. ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಆರ್​.ಜಿ. ದೇವರೆಡ್ಡಿ ವಾದ ಮಂಡಿಸಿದ್ದಾರೆ.