ಹೊಸಕೋಟೆ: ಭಾರತವಷ್ಟೇ ಅಲ್ಲದೆ ವಿಶ್ವ ಕಂಡ ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ತತ್ಪಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಮಾಜದಲ್ಲಿನ ಜಾತಿ ಜಾತಿಗಳ ನಡುವಿನ ಕಂದಕವನ್ನು ತೊಡೆದುಹಾಕಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು.
ನಗರದಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಬಸವ ಜಯಂತಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರರ 889ನೇ ಜಯಂತಿಯಲ್ಲಿ ಮಾತನಾಡಿದರು. ಸಮಾಜದಲ್ಲಿ ಯಾವುದೇ ಜಾತಿ, ಧರ್ಮಗಳ ನಡುವೆ ಭೇದವಿರಬಾರದು, ಎಲ್ಲ ಜಾತಿಯೂ ಒಂದೇ. ಮೇಲು-ಕೀಳು ಎಂಬ ಭಾವನೆ ತೊರೆಯಬೇಕು ಎಂದು 12ನೇ ಶತಮಾನದಲ್ಲೇ ಜಗತ್ತಿಗೆ ಸಾರಿದ ಬಸವಣ್ಣನವರ ಸಂದೇಶ ಸಾರ್ವಕಾಲೀಕವಾಗಿದೆ ಎಂದರು.
ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದೇ ಕರೆಯಲ್ಪಡುವ ಅನುಭವ ಮಂಟಪದ ಕಲ್ಪನೆ ಮೂಡಿಸಿದ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ಜಾತಿ ಧರ್ಮದವರಿಗೂ ಸಮಾನ ಅವಕಾಶ ನೀಡಿದ್ದರು. ಅಷ್ಟೇ ಅಲ್ಲದೆ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಅವಕಾಶ ನೀಡಿ ಇರುವುದೊಂದೇ ಮಾನವ ಧರ್ಮ ಎಂದು ಸಾರಿದ್ದರು ಎಂದು ಹೇಳಿದರು.
ಎಂಟಿಬಿ ಹೃದಯವಂತ ನಾಯಕ: ಈ ಭಾಗದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಶ್ರಮಿಸಿದ ಸಚಿವ ಎಂಟಿಬಿ ನಾಗರಾಜ್ ನಿಜವಾಗಿಯೂ ಹೃದಯಂತ ನಾಯಕರಾಗಿದ್ದಾರೆ. ಒಳ್ಳೆ ಹೃದಯ, ಸಹಿಷ್ಣುತಾ ಭಾವ ಹೊಂದಿರುವ ನಾಯಕರಿಂದ ಮಾತ್ರ ಇಂಥ ಕಾರ್ಯಗಳು ನಡೆಯಲು ಸಾಧ್ಯ ಎಂದು ಹೇಳಿದರು. ಈ ಭಾಗದಲ್ಲಿ ಬಸವ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಇದರ ಸಾಕಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ವಿಷ ಬೀಜ ಬಿತ್ತಬೇಡಿ: ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಬೇಡಿ. ಜಗಜ್ಯೋತಿ ಬಸವಣ್ಣನವರ ಮಾನವ ಧರ್ಮವು ಎಂಬ ಸಂದೇಶದಂತೆ ಎಲ್ಲರೂ ಒಂದಾಗಿ ಜೀವನ ಮಾಡೋಣ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಕರೆ ನೀಡಿದರು. 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಜಾತಿಜಾತಿಗಳ ನಡುವಿನ ಕಂದಕವನ್ನು ಕಿತ್ತೊಗೆಯಲು ಬಸವಣ್ಣನವರು ಸಾಕಷ್ಟು ಶ್ರಮಿಸಿದ್ದರು. ಆದರೆ ಇಂದು ಜಾತಿಗಳ ಹೆಸರಲ್ಲಿ ಒಡಕು ಮೂಡಿಸುವ ರಾಜಕಾರಣ ಕಾಣುತ್ತಿದ್ದೇವೆ ಎಂದ ಸಚಿವರು, ಎಲ್ಲರೂ ಒಂದೇ, ಯಾವುದೇ ಜಾತಿ ಕೀಳಲ್ಲ ಅಥವಾ ಮೇಲಲ್ಲ ಇರುವುದೊಂದೆ ಮಾನವ ಜಾತಿ ಎಂಬ ಸಂದೇಶ ಸಾರಿದ್ದ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಹೇಳಿದರು. ತಾಲೂಕಿನ ಲಿಂಗಾಯತ ಸಮುದಾಯದವರ ಬಹು ವರ್ಷದ ಬೇಡಿಕೆ ಈಡೇರಿಸುವ ಮೂಲಕ ಬಸವಣ್ಣನವರ ಕೃಪೆಗೆ ಪಾತ್ರನಾಗಿ ಪುನೀತನಾಗಿದ್ದೇನೆ ಎಂದರು.
ಮಕ್ಕಳಿಗೆ ವಚನ ಪರಿಚಯ ಮಾಡಿಸಿ: ಬಸವಣ್ಣನವರ ವಚನಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಇದರಿಂದ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲರು ಎಂದು ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವಣ್ಣನ ವಚನದ ಸಾರಗಳನ್ನು ತಿಳಿಯುವುದರಿಂದ ಮನಸ್ಸು ಶುದ್ಧಿಹೊಂದುತ್ತದೆ, ಮೇಲು ಕೀಳೆಂಬ ಭಾವನೆ ನೀಗಿ ಸಮಾಜದಲ್ಲಿ ಸಮಾನತೆ ಭಾವದಿಂದ ಬಾಳಲು ಇದು ಸಹಕಾರಿಯಾಗಲಿದೆ ಎಂದರು.
ತಾಪಂ ಅಧ್ಯಕ್ಷ ಜಯದೇವಯ್ಯ, ನಗರಸಭೆ ಅಧ್ಯಕ್ಷ ಡಿ.ಕೆ ನಾಗರಾಜ್, ಉಪಾಧ್ಯಕ್ಷೆ ಸುಗುಣಾ ಮೋಹನ್, ವೀರಶೈವ ಲಿಂಗಾಯತ ಬಸವ ಜಯಂತಿ ಆಚರಣಾ ಸಮಿತಿ ಮುಖ್ಯಸ್ಥ ನವೀನ್, ನಂಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.