ಜಿಲ್ಲೆ

ಜಾತಿಗಣತಿಯಲ್ಲಿ ಕೈಬಿಟ್ಟಿದೆ ಹಲವಾರು ಜಾತಿಗಳು

ಚಾಮರಾಜನಗರ: ಜಿಲ್ಲೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ನಡೆಸಲಾಗುತ್ತಿರುವ ಜಾತಿ ಜನಗಣತಿಯಲ್ಲಿ ಪರಿಶಿಷ್ಟಜಾತಿ ಬಲಗೈ ಸಮುದಾಯದ ಹಲವು ಉಪಜಾತಿಗಳನ್ನು ಕೈಬಿಟ್ಟಿದ್ದು, ಅಂತಹ ಜಾತಿಗಳ ಕುಲಶಾಸೀಯ ಅಧ್ಯಯನ ನಡೆಸುವಂತೆ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಸ್ವಾಮಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮೇ 5 ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಗಣತಿಯಲ್ಲಿ ಹಲವಾರು ಸಂಗತಿಗಳು ಕಂಡುಬಂದಿದ್ದು, ಕೆಬ್ಬೆ ಹೊಲಯ, ಕಪ್ಪೆ ಹೊಲಯ, ಕುಕ್ಕ ಹೊಲಯ, ಎಮ್ಮೆ ಹೊಲಯ, ಮಾರಿ ಹೊಲಯ, ಕುಕ್ಕುಟ ಹೊಲಯ ಹಾಗೂ ಇನ್ನು ಮುಂತಾದ ಉಪಜಾತಿಗಳು ಪರಿಶಿಷ್ಟರ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಜಾತಿಗಳನ್ನು ಗುರುತಿಸಿ ವೈಜ್ಞಾನಿಕವಾಗಿ ವರ್ಗೀಕರಿಸಲು ಮಾನವ ಶಾಸಜ್ಞರಿಂದ ಕುಲಶಾಸೀಯ ಅಧ್ಯಯನ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ತಮಿಳುನಾಡಿನಿಂದ ಬಂದ ಕೊಂಗ ಹೊಲಯ ಎನ್ನುವ ಜಾತಿಯ ಜನರು ಮೈಸೂರು ಮತ್ತು ಚಾಮರಾಜನಗರ ಮುಂತಾದ ಭಾಗದಲ್ಲಿ ವಾಸವಿದ್ದು, ಇವರ ಜಾತಿಯಲ್ಲಿಯೇ ಹೊಲಯ ಶಬ್ಧ ಅಟಿಕೊಂಡಿದೆ. ಆದರೂ ಇವರನ್ನು ಮಾದಿಗ ಸಮುದಾಯ ಎಂದು ಬರೆಸಿರುವಂತಹ ತಪ್ಪುಗಳು ಕಂಡುಬಂದಿದೆ. ಜಿಲ್ಲೆಯಲ್ಲಿ ಪರಿಶಿಷ್ಟರ ಜನಸಂಖ್ಯೆಯನ್ನು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆ ತೋರುತ್ತಿದ್ದು, ಈ ಕುರಿತು ಆಯೋಗ ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದರು.

ಜಿಲ್ಲೆಯಲ್ಲಿ 2011 ರ ಜನಗಣತಿಯ ಪ್ರಕಾರ ಒಟ್ಟು 58,500 ಕುಟುಂಬಗಳಿದ್ದು, 2,58,000 ಜನಸಂಖ್ಯೆ ಇತ್ತು. 2025 ರ ಪರಿಶಿಷ್ಟ ಜಾತಿ ಜನಗಣತಿಯಲ್ಲಿ 70,643 ಕುಟುಂಬಗಳು ದಾಖಲಾಗಿದ್ದು, ಒಟ್ಟು 2,34,848 ಜನಸಂಖ್ಯೆ ಕಂಡು ಬಂದಿದೆ. ಹಾಗಾದರೇ ಉಳಿದ 23,152 ಜನ ಎಲ್ಲಿ ಹೋದರು ಎಂಬ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಬೇರೆ ಕಡೆಗೆ ವಲಸೆ ಹೋಗಿರುವ ಪರಿಶಿಷ್ಟ ಸಮುದಾಯದ ಜನರು ಜಾತಿಜನಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ಪಿ.ಸಂಘಸೇನಾ, ಕಮಲ್ ನಾಗರಾಜು, ಭಾಗ್ಯ, ಸುಂದರ್ ಕಲಿವೀರ, ಸಿ.ರಾಜೇಂದ್ರ ಹೊನ್ನೂರು, ಉತ್ತಂಬಳ್ಳಿ ಲಿಂಗಣ್ಣ, ಬಸವರಾಜು, ಚೇತನ್ ಹಾಜರಿದ್ದರು.

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಯಾವುದೇ ಕಾರಣಕ್ಕೂ ಒಳಮೀಸಲಾತಿಯನ್ನು ವಿರೋಧ ಮಾಡಿಲ್ಲ. ಆದರೇ ಕೆಲವರು ಈ ವಿಚಾರದಲ್ಲಿ ಪರಿಶಿಷ್ಟ ಸಮುದಾಯದವರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೂಲಿ ಕೆಲಸ ಮತ್ತು ಇನ್ನಿತರೆ ಕೆಲಸಗಳನ್ನು ಹರಸಿ ಹೊರಗೆ ಇರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರು ಜಾತಿಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

-ಕೆ.ಎಂ.ನಾಗರಾಜ್, ಸಂಚಾಲಕ, ದಲಿತ ಸಂಘರ್ಷ ಸಮಿತಿ, ಚಾಮರಾಜನಗರ