ಜಿಲ್ಲೆ

ಜಾತಿಗಣತಿ ಸರ್ವೇ ಮತ್ತೆ ವಿಸ್ತರಣೆ ಸಲ್ಲ

ಚಿತ್ರದುರ್ಗ: ಒಳಮೀಸಲಾತಿ ಜಾರಿ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಕಾರ್ಯ ಯಾವ ಕಾರಣಕ್ಕೂ ಮತ್ತೆ ವಿಸ್ತರಿಸಬಾರದು ಎಂದು ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಬುಧವಾರ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಕಚೇರಿಗೆ ಭೇಟಿ ನೀಡಿ, ಸಮೀಕ್ಷಾ ಕಾರ್ಯ ವಿಸ್ತರಿಸಬೇಡಿ ಎಂದರು.

ಜನಸಂಖ್ಯೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗುರುತಿಸಲು ಪರಿಶಿಷ್ಟರಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಮೇ 5ರಿಂದ ಜಾತಿಗಣತಿ ಸಮೀಕ್ಷೆ ನಡೆಯಿತು. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೂ ಕ್ರಮೇಣ ಸುಗಮವಾಗಿ ಆಗಿದೆ. ಆದರೆ, ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲವೆಂಬ ಕಾರಣಕ್ಕೆ 3 ಬಾರಿ ಸಮೀಕ್ಷೆ ವಿಸ್ತರಿಸಲಾಯಿತು ಎಂದು ಹೇಳಿದರು.

ಈಗ ಮತ್ತೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತಗೊಳಿಸಿ ಜು. 6ರವರೆಗೆ ವಿಸ್ತರಿಸಲಾಗಿದೆ. ಇದೇ ಅಂತಿಮ ಅವಕಾಶ ಆಗಬೇಕು. ಯಾವ ಕಾರಣಕ್ಕೂ ಇನ್ನೊಮ್ಮೆ ವಿಸ್ತರಣೆ ಮಾಡಬಾರದು. ಈ ನಿಟ್ಟಿನಲ್ಲಿ ಆಯೋಗ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

6ರ ನಂತರ ಅಂತಿಮ ವರದಿ ತಕ್ಷಣ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಈ ತಿಂಗಳಾಂತ್ಯದಲ್ಲೇ ಒಳಮೀಸಲಾತಿ ಜಾರಿಗೆ ಸಹಕರಿಸಬೇಕು. ಈ ಮೂಲಕ ನೊಂದ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು.

ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಇದ್ದರು.