oppo_2 
ಜಿಲ್ಲೆ

ಜಾತಿಗಣತಿ ವರದಿ ಜಾರಿ ಮಾಡಿ

ಕಲಬುರಗಿ: ರಾಜ್ಯದಲ್ಲಿ ಕಾಂತರಾಜ್ ಅವರು ನೀಡಿರುವ ಜಾತಿ ಜನಗಣತಿಯ ವರದಿಯನ್ನು ಜಾರಿಗೆ ತರಬೇಕು, ದೇಶಾದ್ಯಂತ ಜನಗಣತಿ ನಡೆಸಬೇಕು ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ಆಗ್ರಹಿಸಿದರು.

ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸಾಮಾಜಿಕ ನ್ಯಾಯ, ಆರ್ಥಿಕ, ರಾಜಕೀಯ ಸ್ಥಾನ ದೊರಕಲು ಜಾತಿ ಗಣತಿ ಅವಶ್ಯವಿದೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ವಸತಿ ಶಾಲೆಗಳು ಸೇರಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರ, ತುಂಡುಗುತ್ತಿಗೆ ಆಧಾರ, ಹೊರ ಸಂಪನ್ಮೂಲ ಆಧಾರದಲ್ಲಿ ನೌಕರಿಗಳನ್ನು ನೀಡುತ್ತಿದ್ದು, ಕೂಡಲೇ ಇದನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಕಾಯಂ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ೨೦೦೫ರಿಂದಲೂ ಸಮಾಜವಾದಿ ಪಕ್ಷ ಸಕ್ರೀಯವಾಗಿದ್ದು, ಪ್ರಸ್ತುತ ಎದುರಾಗಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎಲ್ಲೆಡೆ ಪಕ್ಷದಿಂದ ಸ್ಪರ್ಧಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ರವೀಂದ್ರ ಇಂಜಳ್ಳಿಕರ್, ರಾಜ್ಯ ಕಾರ್ಯದರ್ಶಿ ಶಂಕರ್ ಯಾದವ್ ಇತರರಿದ್ದರು.