ಜಿಲ್ಲೆ

ಜಾತಿಗಣತಿ ಯಶಸ್ಸಿಗೆ ಪ್ರತಿಯೊಬ್ಬರು ಸಹಕರಿಸಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಾತಿಗಣತಿ ಸಮೀಕ್ಷೆಯಲ್ಲಿ ಉಪಜಾತಿಯನ್ನು ಕಡ್ಡಾಯವಾಗಿ ಬರೆಯಿಸಿ ಗಣತಿಯ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ರಾಜ್ಯ ದಲಿತ ಮಹಾಸಭಾ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮನವಿ ಮಾಡಿದರು.

ರಾಜ್ಯಾದ್ಯಂತ ಮೇ 29 ರವರೆಗೆ ಜಾತಿಗಣತಿ ಸಮೀಕ್ಷೆಯನ್ನು ವಿಸ್ತರಣೆ ಮಾಡಿರುವುದು ಸ್ವಾಗತಾರ್ಹ. ಇದರ ಸದುಪಯೋಗವನ್ನು ಸಮುದಾಯದ ಜನರು ಪಡೆದುಕೊಂಡು ಉಪಜಾತಿಯ ಹೆಸರನ್ನು ನಮೂದಿಸಬೇಕು. ಸರ್ಕಾರಿ ನೌಕರರು ಹಾಗೂ ವಿದ್ಯಾವಂತರು ಈಗಾಗಲೇ ನಡೆದಿರುವ ಸಮೀಕ್ಷೆಯಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪರಿಶಿಷ್ಟ ಜಾತಿ ಎಂದು ಮಾತ್ರ ಬರೆಸಿದ್ದು, ಅವರು ಕಡ್ಡಾಯವಾಗಿ ಉಪಜಾತಿಯನ್ನು ನಮೂದಿಸಬೇಕು. ಇಲ್ಲವಾದಲ್ಲಿ ಒಳ ಮೀಸಲಾತಿ ಜಾರಿಗೆ ಸರಿಯಾದ ಅಂಕಿ-ಅಂಶ ಸಿಗುವುದಿಲ್ಲ ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹನೂರು ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ ಶೇ.90 ರಷ್ಟು ಜಾತಿಗಣತಿ ಸಮೀಕ್ಷೆ ಪೂರ್ಣಗೊಂಡಿದ್ದು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ.80ರಷ್ಟು ಸಮೀಕ್ಷೆಯಾಗಿದೆ. ಉಳಿದ ದಿನಗಳಲ್ಲಿ ಶೇ. 100ರಷ್ಟು ಸಮೀಕ್ಷೆ ಆಗುವಂತೆ ಎಲ್ಲರೂ ಸಹಕರಿಸಬೇಕು. ಜಾತಿ ಗಣತಿ ಅತ್ಯಂತ ಪ್ರಮುಖವಾಗಿದ್ದು, ಯಾರು ಕೂಡ ಹಿಂಜರಿಯದೆ ಉಪಜಾತಿಯನ್ನು ನಮೂದಿಸಿ ಸಮೀಕ್ಷೆಯ ಕಾಲಾವಧಿಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಶಿವಣ್ಣ, ಮುಖಂಡ ಉಮೇಶ್, ಚರಣ್, ಮಹದೇವಸ್ವಾಮಿ ಹಾಜರಿದ್ದರು.