ಕಲಬುರಗಿ: ನ್ಯಾಯಾಧೀಶ ನಾಗಮೋಹನ ದಾಸ್ ಆಯೋಗದ ವರದಿಯಂತೆ ರಾಜ್ಯ ಸರ್ಕಾರ ಒಳಮೀಸಲು ಜಾರಿಗೆ ಮುಂದಾಗಿದ್ದು, ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದು ಪುನಃ ಜಾತಿ ಜನ ಗಣತಿ ನಡೆಸಬೇಕು ಎಂದು ಗೋರ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ ಚವ್ಹಾಣ್ ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳಲ್ಲಿ ಉಪ ವರ್ಗ ಮಾಡಲು ವರ್ಗೀಕರಣಕ್ಕೆ `ದಿ ಕಮೀಷನ್ ಆಫ್ ಇಂಕ್ವಯಿ ಆ್ಯಕ್ಟ್ ೧೯೫೨' ಕಾಯ್ದೆ ಅಡಿ ನಾಗಮೋಹನ ದಾಸ ಆಯೋಗವೂ ಜ.೩೧ರೊಳಗೆ ಆಕ್ಷೇಪಣೆ ಸಲ್ಲಿಸಲು ಮನವಿ ಮಾಡಿದೆ. ನಾಗಮೋಹನದಾಸ ವರದಿಯಲ್ಲಿ ಬಂಜಾರ ಸಮಾಜದ ಜನಸಂಖ್ಯೆ ೧೨ ಲಕ್ಷ ಎಂಬುದು ಒಪ್ಪಲು ಸಾಧ್ಯವಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರದಿ ಜಾರಿ ಆದರೆ ಬೋವಿ, ಕೊಂಚ, ಕೊರಮ, ಬಂಜಾರ ಸಮಾಜಕ್ಕೆ ಅನ್ಯಾಯವಾಗಲಿದೆ. ಜಾತಿ ಗಣತಿಯ ಅಂಕಿ ಸಂಖ್ಯೆಗಳಲ್ಲಿ ಗೊಂದಲಗಳಿದ್ದು, ಒಪ್ಪುವ ಅಂಕಿ, ಸಂಖ್ಯೆಗಳು ಇಲ್ಲ. ಈ ಬಗ್ಗೆ ಹಲವು ಜಿಲ್ಲೆಗಳಲ್ಲಿ ಆರ್‌ಟಿಐ ಮೂಲಕ ಮಾಹಿತಿ ಪಡೆದಿದ್ದು, ೨೦೧೧ರ ಜನಗಣತಿ ಆಧಾರದಲ್ಲಿನ ಜಾತಿ ಜನಸಂಖ್ಯೆ ತೋರಿಸಲಾಗುತ್ತಿದೆ. ಇದು ಒಪ್ಪತಕ್ಕದ್ದು ಅಲ್ಲ, ಸರಿಯಾಗಿ ಪುನಃ ಜಾತಿ ಜನಗಣತಿ ನಡೆಸಬೇಕು ಎಂದು ಆಗ್ರಹಿಸಿದರು.
ತಾಂಡಾಗಳಲ್ಲಿ ಸರಿಯಾದ ಸಮೀಕ್ಷೆಗಳು ಆಗಿಲ್ಲ ಎಂದು ಹಲವು ಕಡೆ ಜನರು, ಅಧಿಕಾರಿಗಳು ಹೇಳುತ್ತಿದ್ದಾರೆ. ಪೂರ್ಣ, ಸಮರ್ಪಕ ಮಾಹಿತಿ ಇಲ್ಲದೆ ಹೇಗೆ ಒಳಮೀಸಲು ನೀಡುತ್ತಾರೆ ಎಂದು ಪ್ರಶ್ನಿಸಿದರು. ಸೈದಾಂತಿಕ ದತ್ತಾಂಶಗಳನ್ನು ಪಡೆದು, ಆರ್ಥಿಕ, ಶೈಕ್ಷಣಿಕ ಪ್ರಗತಿ ಸೇರಿ ಇತರ ಅಂಶ ಅಳವಡಿಸಿ ದತ್ತಾಂಶ ರಚಿಸಿ, ಅದರ ಆಧಾರದಲ್ಲಿ ಒಳಮೀಸಲು ಕೊಡಬೇಕು ಎಂದರು.
ನಾಗಮೋಹನದಾಸ ಆಯೋಗಕ್ಕೆ ಸಮಾಜವೂ ೧೦೧ ಬೇಡಿಕೆಗಳನ್ನು ಇಟ್ಟಿದ್ದು, ಬಂಜಾರ ಪ್ರತ್ಯೇಕ ಸೈದ್ಧಾಂತಿಕ ದತ್ತಾಂಶವನ್ನು ಸಂಗ್ರಹಿಸಿ, ಕುಲಶಾಸ್ತç ಅಧ್ಯಯನ ನಡೆಯಬೇಕು, ಪುನಃ ಜಾತಿ ಗಣತಿ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮಾನಸಿಂಗ್ ಚವ್ಹಾಣ್, ನಗರಾಧ್ಯಕ್ಷ ವಿನೋದ ರಾಠೋಡ್, ಪ್ರಭಾಕರ ರಾಠೋಡ್, ರಾಹುಲ್ ನಾಯಕ್ ಇತರರಿದ್ದರು.