ಚಿಕ್ಕಮಗಳೂರು: ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಜಾತಿ ಸಮೀಕ್ಷೆಯ ನೈಜ ವರದಿ ಜಾರಿಮಾಡಬೇಕು ಹಾಗೂ ಈಗಾಗಲೇ ಸಿದ್ಧವಾಗಿರುವ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ವಿಶ್ವಕರ್ಮ ಸಮಾಜ ಸೇವಾ ಸಭಾ ಜಿಲ್ಲಾಧ್ಯಕ್ಷ ಎಚ್.ಆರ್.ಉಮಾಶಂಕರ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಸಮೀಕ್ಷೆಯಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಅಂಕಿಅAಶಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಸಮಾಜದಲ್ಲಿ ೨೦೧೫ ರಲ್ಲಿ ೩೫ ಲಕ್ಷ ಜನಸಂಖ್ಯೆ ಇದ್ದು, ೨೦೨೫ರ ಜಾತಿ ಗಣತಿಯಲ್ಲಿ ೬ ಲಕ್ಷಕ್ಕೆ ಇಳಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಮಾಜ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ೧೫ ಲಕ್ಷ ಜನಸಂಖ್ಯೆ ಇದೆ ಎಂದು ವರದಿ ಸಿದ್ದಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ೩೫ ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ೪ ಸಾವಿರ, ತರೀಕೆರೆ ೬ ಸಾವಿರ, ಶೃಂಗೇರಿಯಲ್ಲಿ ೨ ಸಾವಿರ ಸಮುದಾಯದ ಜನರಿದ್ದಾರೆ ಎಂದು ಹೇಳಿದರು.
ಕೂಡಲೇ ಮರು ಜಾತಿಗಣತಿ ನಡೆಸುವ ಮೂಲಕ ನೈಜ ವರದಿಯನ್ನು ಸಿದ್ದಪಡಿಸಿ ಜಾರಿಮಾಡಬೇಕು. ಇಲ್ಲವಾದಲ್ಲಿ ಸಮಾಜವು ಸಂಘಟನೆಗಳೊAದಿಗೆ ಸೇರಿ ಮುಂದೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ರೀತಿ ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ವಿಶ್ವಕರ್ಮ ಸಮಾಜಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಜಾತಿಗಣತಿ ವರದಿಯನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ವಿಶ್ವಕರ್ಮ ಸಮಾಜಕ್ಕೆ ಜಾತಿನಿಂದನೆ ಮಾಡುತ್ತಿರುವುದು ಎದ್ದು ಕಾಣುತ್ತಿದ್ದು, ಸಿಇಟಿ ಪರೀಕ್ಷೆಯಲ್ಲಿ ಜನಿವಾರವನ್ನು ತೆಗೆಸಿ ಪರೀಕ್ಷಾ ಕೊಠಡಿಗೆ ಕಳುಹಿಸಿರುವುದು ಹಿಂದೂ ಧರ್ಮದ ಆಚರಣೆಗೆ ಅಡ್ಡಿಪಡಿಸಿದಂತಾಗಿದೆ ಎಂದು ದೂರಿದರು.
ಈ ಎಲ್ಲಾ ಘಟನೆಗಳು ನಡೆಯುತ್ತಿರುವಾಗಲೇ ಲಕ್ಷ್ಮೀ ನಿವಾಸ ಧಾರಾವಾಹಿಯ ಸನ್ನಿವೇಶ ಒಂದರಲ್ಲಿ ಮಾತನಾಡುವ ಭರದಲ್ಲಿ ಕಳ್ಳ ಆಚಾರಿ ಎಂದು ಪದೇ ಪದೇ ನಿಂದಿಸಿರುವುದು ಖಂಡನೀಯ. ಮನೆಯಲ್ಲೇ ಕುಳಿತು ಧಾರಾವಾಹಿಯ ನಿರ್ಮಾಪಕರು ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಈ ಸನ್ನಿವೇಶವನ್ನು ಕಡಿತಗೊಳಿಸಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಜೆ. ಚಂದ್ರಶೇಖರ ಆಚಾರ್ಯ, ವಿಶ್ವಕರ್ಮ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ರತೀಶ್, ಉಪಾಧ್ಯಕ್ಷ ಸಿ.ಜೆ. ಬಾಲಕೃಷ್ಣ, ಪ್ರಮುಖರಾದ ರಾಮಪ್ಪಾಚಾರ್ಯ, ಮೋಹನ್, ಅರವಿಂದ, ಪರಮೇಶ್ವರಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.