ಜಿಲ್ಲೆ

ಜಾತಿ ರಾಜಕಾರಣ ಮಾಡಬೇಡಿ

ಸಿದ್ದಾಪುರ: ಜವಾಬ್ದಾರಿ ಸ್ಥಾನದಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕ್ಷೇತ್ರದಲ್ಲಿ ಯಾವುದೇ ಅನಾಹುತ ನಡೆದರೂ ಅವರಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ಮುಂದಾಗಬೇಕೆ ಹೊರತು ಯಾವುದೇ ಜಾತಿ ರಾಜಕಾರಣ ಮಾಡಬಾರದು ಎಂದು ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಯಾದ ಮಳೆಯಿಂದ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಮೃತಪಟ್ಟ ಪರಮೇಶ್ವರ ಹೆಗಡೆ ತಾರೇಸರ ಅವರಿಗೆ ಒಂದೇ ವಾರದಲ್ಲಿ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದು ಸ್ವಾಗತಾರ್ಹ. ಆದರೆ, ಕಳೆದ ವರ್ಷ ಹಾರ್ಸಿಕಟ್ಟಾ ಸಮೀಪದ ಕಂಚೀಮನೆಯ ದೀಕ್ಷಾ ನಾಗರಾಜ ಮಡಿವಾಳ ಎಂಬುವವರು ಮನೆ ಹಿಂದಿನ ಧರೆ ಕುಸಿದು ಮನೆಯೊಳಗೆ ಮೃತಪಟ್ಟಿದ್ದರು. ಆದರೆ, ಅವರಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಕೇವಲ ಹಿಂದುಳಿದ ವರ್ಗದವರು ಎನ್ನುವ ಕಾರಣಕ್ಕಾಗಿಯೇ? ಇರಬಹುದೇ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಇವರು ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಎಲ್ಲ ಜಾತಿಯವರು ಮತ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರಾಜಕೀಯ ಮಾಡದೇ ದೀಕ್ಷಾ ನಾಗರಾಜ ಮಡಿವಾಳ ಅವರ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಗಾಳಿ-ಮಳೆಗೆ 48 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 23 ಮನೆಗಳು ಸಂಪೂರ್ಣ ಹಾನಿಗೊಂಡಿವೆ. ಇಲ್ಲಿಯವರೆಗೆ ಕೇವಲ 95 ಸಾವಿರ ರೂ. ಮಾತ್ರ ಬಂದಿದೆ. ಸರ್ಕಾರ ಘೊಷಣೆ ಮಾಡಿದಂತೆ 5 ಲಕ್ಷ ರೂ.ಗಳನ್ನು ತಕ್ಷಣ ಕೊಡಿಸುವುದಕ್ಕೆ ವಿಧಾನಸಭಾಧ್ಯಕ್ಷರು ಮುಂದಾಗಬೇಕು ಎಂದರು.

ದೀಕ್ಷಾ ನಾಗರಾಜ ಮಡಿವಾಳ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸದಿದ್ದರೆ ಹಾಗೂ ಅನಧಿಕೃತ ಮದ್ಯ ಮಾರಾಟ ಬಂದ್ ಮಾಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಾಸೀರ್ ಖಾನ್, ಬಾಲಕೃಷ್ಣ ನಾಯ್ಕ ಕೋಲಸಿರ್ಸಿ, ಅಶೋಕ ನಾಯ್ಕ ಹಾರ್ಸಿಕಟ್ಟಾ, ಸಾವೇರ್ ಡಿಸಿಲ್ವಾ, ಮುನಾವರ್, ಸುರೇಂದ್ರ ಗೌಡ, ಗಂಗಾಧರ ಮಡಿವಾಳ ಇತರರಿದ್ದರು.