ಜಿಲ್ಲೆ

ಜಾತಿ ನಿಂದನೆ, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ

ಹಾಸನ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಏಕಾಏಕಿ ನುಗ್ಗಿದ ಕಾರ್ಯಕರ್ತನೊಬ್ಬ ಅಲ್ಲಿದ್ದ ಕುರ್ಚಿಗಳು ಧ್ವಂಸ ಮಾಡಿದಲ್ಲದೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ರವಿ (44) ಎಂಬುವವರ ಮೇಲೆ ಹಾಸನ ಜಿಲ್ಲಾ ವೃತ್ತಿಪರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಡಗೂರು ವೆಂಕಟೇಶ್ ಅವರು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರು ನೀಡಿರುವ ದೂರಿನಲ್ಲಿ, ‘ಡಿ.9ರಂದು ನಾನು ಪಕ್ಷದ ಕಚೇರಿಯಲ್ಲಿ ಪಾಪಯ್ಯ ಮತ್ತು ಎಚ್.ಬಿ.ಶಿವಕುಮಾರ ಅವರೊಂದಿಗೆ ಮಾತನಾಡುತ್ತಾ ಕುಳಿತುಕೊಂಡಿದ್ದ ಸಮಯದಲ್ಲಿ ಅಲ್ಲಿಗೆ ಬಂದ ರವಿ ಏಕಾಏಕಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಏಕೆ ಬೈಯುತ್ತಿದ್ದಿಯಾ ಎಂದು ಕೇಳಿದ್ದಕ್ಕೆ ಕೇಳಿದಾಗ ಅಲ್ಲೇ ಇದ್ದ ಕುರ್ಚಿಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾನೆ. ಕಚೇರಿಯಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತನ್ನ ಕಾಲಿನಲ್ಲಿದ್ದ ಶೂ ಅನ್ನು ಬಿಚ್ಚಿಕೊಂಡು ಹೊಡೆದು, ಅಪಮಾನಗೊಳಿಸಿದ್ದಾನೆ. ಜಾತಿ ಹೆಸರೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ,’ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರ ಕಾಂಗ್ರೆಸ್ ಕಚೇರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.