ಎನ್.ಆರ್.ಪುರ: ಶಿವಧಾರವನ್ನು ಧರಿಸಿದವರೆಲ್ಲರೂ ವೀರಶೈವಲಿಂಗಾಯತರೇ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬೇಲೇನಹಳ್ಳಿ ಸೋಮಶೇಖರ್ ಹೇಳಿದರು.
ಪಟ್ಟಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲೂಕು ಘಟಕ ಸ್ಥಾಪನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ವೀರಶೈವ, ಲಿಂಗಾಯತರೆಂದು ಜಾತಿ, ಧರ್ಮಗಳನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಯಾರೂ ಕಿವಿಕೊಡಬಾರದು. ವೀರಶೈವವೂ ಒಂದೇ, ಲಿಂಗಾಯತವೂ ಒಂದೇ. ನಾವೆಲ್ಲರೂ ವೀರಶೈವಲಿಂಗಾಯತರೇ ಎಂದರು.
ನಾವು ಸಂಘಟಿತರಾದರೆ ನಮ್ಮ ಜಾತಿ, ಧರ್ಮವನ್ನು ರಕ್ಷಿಸಿಕೊಳ್ಳಬಹುದಾಗಿದೆ. ನಮ್ಮ ಸಮುದಾಯದ ಯಾರಿಗಾದರೂ ತೊಂದರೆ, ಅನ್ಯಾಯವಾದರೆ ನಮಗೆ ಅಖಿಲ ಭಾರತ ವೀರಶೈವ ಮಹಾಸಭಾ ಜತೆ ನಿಲ್ಲುತ್ತದೆ. ನ್ಯಾಯ ಕೊಡಿಸುವವರೆಗೂ ಹೋರಾಟ ಮಾಡಲಿದೆ ಎಂದರು.
ಪ್ರತಿ ವರ್ಷ ಮಹಾ ಸಭಾದಿಂದ ವೀರಶೈವ ಲಿಂಗಾಯತ ಕುಟುಂಬದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಮಹಾಸಭಾದ ಸದಸ್ಯರಾಗುವುದರಿಂದ ಮಹಾಸಭಾ ನಿರ್ದೇಶಕರು, ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮತದಾನದ ಹಾಗೂ ಉಮೇದುವಾರಿಕೆಯನ್ನು ಸಲ್ಲಿಸುವ ಹಕ್ಕು ದೊರಕುತ್ತದೆ. ಈಗಾಗಲೇ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ, ಕಡೂರು ತಾಲೂಕುಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಾಸಭಾದ ಕೋಶಾಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಕಾರ್ಯದರ್ಶಿ ಡಿ.ಬಾರ್ಗೇಶಪ್ಪ, ಪಟ್ಟಣದ ವೀರಶೈವ ಲಿಂಗಾಯತ ಸಮುದಾಯದ ಮಹಿಳಾ ಘಟಕದ ಉಷಾ ರವಿಶಂಕರ್, ಸಮುದಾಯದ ಪ್ರಮುಖರಾದ ಎಚ್.ಎನ್.ರವಿಶಂಕರ್, ವೈ.ಎನ್.ಇಂದುಶೇಖರ್, ವೈ.ಎಸ್.ರವಿ, ಎನ್.ಎಂ.ಕಾರ್ತಿಕ್, ಜಯಣ್ಣ, ಎಂ.ಸಿ.ಗುರುಶಾಂತಪ್ಪ, ಶಿವಪ್ರಸಾದ್, ರಾಕೇಶ್ ಕೌದಿ, ದರ್ಶನ್ ಇದ್ದರು.