ಕಲಬುರಗಿ: ತರಬೇತಿ ಪೂರ್ಣಗೊಳಿಸಿದ ಕಾರ್ಯಕ್ಷೇತ್ರಕ್ಕೆ ಹೋಗುತ್ತಿರುವ ಪಿಎಸ್‌ಐ, ಆರ್‌ಎಸ್‌ಐಗಳು ಜಾತಿ, ಧರ್ಮ, ಆಮಿಷದಿಂದ ದೂರವಿದ್ದು, ಕೆಲಸದಲ್ಲಿ ನಿವೃತ್ತರಾಗಿ ಜನರಲ್ಲಿ ಇಲಾಖೆಯ ಬಗ್ಗೆ ಭರವಸೆ ಮೂಡಿಸಬೇಕು ಎಂದು ತರಬೇತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ ಸಲಹೆ ನೀಡಿದರು.
ನಗರದ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ೧೨ನೇ ತಂಡದ ಪಿಎಸ್‌ಐ (ನಾಗರಿಕ) ಹಾಗೂ ೯ನೇ ತಂಡದ ಆರ್‌ಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪೊಲೀಸ್ ಧಿರಿಸು ದೊರಕಿರುವುದು ನಮ್ಮ ಪುಣ್ಯ. ಇತರ ಇಲಾಖೆಯಂತೆ ನಮ್ಮ ಇಲಾಖೆ ಅಲ್ಲ. ದಿನದ ೨೪ಗಂಟೆ ಕೆಲಸ ಇರುತ್ತದೆ ಎಂದರು.
ಪೊಲೀಸರು ಕೆಲಸವಾಗಿ ನೋಡದೆ, ಫ್ಯಾಶನ್ ಮಾಡಿಕೊಂಡಾಗ ಖುಷಿ ದೊರೆಯುತ್ತದೆ. ಇತ್ತೀಚೆಗೆ ಕೆಲವು ಪಿಎಸ್‌ಐಗಳು ರೌಡಿಗಳು, ಸಮಾಜ ಘಾತುಗಳ ಶಕ್ತಿಗಳ ಜತೆ ಕೈಜೋಡಿಸಿದ್ದಕ್ಕೆ ಜೈಲಿಗೆ ಹೋದರು. ಹಲವು ಆಸೆ, ಆಮಿಷ ತೋರಿಸಿ, ದಾರಿ ತಪ್ಪಿಸುವವರು ಇರುತ್ತಾರೆ. ಅಂತವರ ಬಗ್ಗೆ ನಿಗಾ ಇರಲಿ ಎಂದು ಹೇಳಿದರು.
ಸಂಸ್ಥೆಯಲ್ಲಿ ಗುಂಪುರಾರಿಕೆ ಮಾಡದೆ ಎಲ್ಲರನ್ನು ಕೂಡಿಕೊಂಡು ಹೋಗಿ. ಮಹಿಳೆಯರು, ಮಕ್ಕಳು, ಬಡವರು, ದೂರು ಕೊಡಲು ಬಂದರೆ ವಿಶೇಷ ಕಾಳಜಿ ನೀಡಿ. ನ್ಯಾಯ ನೀಡುವ ನೀವೆ ತಂದೆ, ತಾಯಿ, ದೇವರಂತೆ ಕಾಣುತ್ತಾರೆ. ಆರಾಧಿಸುತ್ತಾರೆ. ನಂಬಿಕೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಕುಟುಂಬದ ಬಗ್ಗೆ ಕಾಳಜಿ ಇಟ್ಟುಕೊಳ್ಳಿ. ಸಮಾಜಕ್ಕೆ ಕೃತಜ್ಞರಾಗಿ ಇರಿ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ, ಎಸ್‌ಪಿ ಡೆಕ್ಕಾ ಕಿಶೋರಬಾಬು ಸ್ವಾಗತಿಸಿ ಮಾತನಾಡಿ, ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ಇದುವರೆಗೆ ೭೪೦೦ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಪ್ರಸ್ತುತ ಪಿಎಸ್‌ಐ ಕ್ರೀಡಾ, ೬ ನೇರ ನೇಮಕದಲ್ಲಿ ನೇಮಕವಾಗಿದ್ದಾರೆ. ಎಲ್ಲ ರೀತಿಯ ತರಬೇತಿಯನ್ನು ಪೂರ್ಣಪ್ರಮಾಣದಲ್ಲಿ ನೀಡಲಾಗಿದೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಉಪ ಪೊಲೀಸ್ ಆಯುಕ್ತೆ ಕನ್ನಿಕಾ ಸಿಕ್ರಿವಾಲ್, ಬಿಂಧುಮಣಿ ಆರ್.ಎನ್., ಲೋಕಾ ಎಸ್‌ಪಿ ಆಂಟೋನಿ ಜಾನ್, ಪ್ರವೀಣ ನಾಯಕ, ಎಎಸ್‌ಪಿ ಶ್ರೀನಿಧಿ ಇತರರಿದ್ದರು. ಉಪ ಪ್ರಾಂಶುಪಾಲ ಶ್ರೀಕಾಂತ ಕಟ್ಟಿಮನಿ ವಂದಿಸಿದರು. ತAಡ ಮುನ್ನಡೆಸಿದವರು: ನಿರ್ಗಮನ ಪಥಸಂಚಲನವನ್ನು ಕಿಶೋರ್‌ಕುಮಾರ ಮುನ್ನಡೆಸಿದರೆ. ಸಹ ನಾಯಕಿಯಾಗಿ ಸಾಧನಾ ಎಲ್. ಸಾಥ್ ನೀಡಿದರು. ಗಣೇಶ, ಕರಿಷ್ಮಾ ಶೇಖ್, ಪ್ರತೀಕ ಶೆಟ್ಟಿ, ಅಭಿಷೇಕ ಶೆಟ್ಟಿ ಇತರ ತಂಡಗಳನ್ನು ಮುನ್ನಡೆಸಿದರು.