ಚಿತ್ರದುರ್ಗ: ಕಾಡುಗೊಲ್ಲ ಸಮುದಾಯಕ್ಕೆ ಜಾತಿ ದೃಢೀಕರಣ ಪತ್ರ ನೀಡದ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜನಸ್ನೇಹಿ ಅಟಲ್ಜಿ ನಿರ್ದೇಶನಾಲಯದ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ, ಬಿಸಿಎಂ ಅಧಿಕಾರಿ, ತಹಸೀಲ್ದಾರ್‌ಗೆ ಸ್ಪಷ್ಟ ಆದೇಶ ನೀಡಿದ್ದರು ತಹಸೀಲ್ದಾರರು ಪ್ರಶ್ನಿಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಡುಗೊಲ್ಲ ಸಮುದಾಯಕ್ಕೆ ದನ, ಕುರಿ ಸಾಕಾಣಿಕೆಯೇ ಕುಲಕಸುಬು ಆಗಿದೆ. ಈ ಆಧಾರದ ಮೇಲೆ ಜಾತಿ ದೃಢೀಕರಣ ಪತ್ರ ನೀಡಬಹುದು. ಆದರೂ ವಿನಾಕಾರಣ ಸತಾಯಿಸುತ್ತಿದ್ದಾರೆ ಎಂದು ಡಿಸಿ ಎದುರು ಅಳಲು ತೋಡಿಕೊಂಡರು.
2018ರ ಜ. 29ರಂದು ರಾಜ್ಯ ಸರ್ಕಾರ ಕಾಡುಗೊಲ್ಲ ಜಾತಿ ದೃಢೀಕರಣ ಪತ್ರ ನೀಡುವಂತೆ ಆದೇಶಿಸಿದೆ. ಆದರೆ, ಈವರೆಗೂ ಜಾತಿ ಪ್ರಮಾಣ ಪತ್ರ ನೀಡದೆ ಅಲೆದಾಡಿಸುತ್ತಿರುವ ಜಿಲ್ಲೆಯ ಆರು ತಾಲೂಕುಗಳ ತಹಸೀಲ್ದಾರ್, ಸಂಬಂಧಿಸಿದ ಸಿಬ್ಬಂದಿ ಸೇವೆ ವಜಾಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದರು.
ಸಂಘದ ರಾಜ್ಯ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿಲ್ಲಾ ಅಧ್ಯಕ್ಷ ಎಸ್.ರಾಜಕುಮಾರ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಸುಂಕಪ್ಪ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ರಾಜಣ್ಣ ಬೂದಿಹಳ್ಳಿ, ಪ್ರಶಾಂಶ್, ಕೃಷ್ಣಪ್ಪ, ಯಲಗಟ್ಟೆ ವೀರೇಶ್ ಇತರರಿದ್ದರು.