ಜಿಲ್ಲೆ

ಜಾತಿ ಜನಗಣತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ

ಮೈಸೂರು: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಸತ್ಯಾಂಶವನ್ನು ಬರೆಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಕುವೆಂಪುನಗರದ ಆದಿಶಕ್ತಿ ಕಾಳಮ್ಮ ಬಂದಂತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿಯನ್ನು ಬರೆಸುವಾಗ ಉತ್ಪ್ರೇಕ್ಷೆ ಮಾಡಿ ಹೇಳಬೇಡಿ. ಇದರಿಂದ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಗಣತಿ ಮುಗಿದ ಮೇಲೆ ಊರಿನ ಮಧ್ಯದಲ್ಲಿ ದೊಡ್ಡ ಸ್ಕ್ರೀನ್ ಹಾಕಿ ಎಲ್ಲ ಸಂಗತಿಗಳನ್ನು ಬಟಾಬಯಲು ಮಾಡುತ್ತಾರೆ ಎಂದು ಎಚ್ಚರಿಸಿದರು.

ತಾಯಂದಿರು ತಮ್ಮದೇ ಆದ ಕರ್ತವ್ಯ ಹೊಂದಿದ್ದಾರೆ. ಕಾರ್ಯನಿಮಿತ್ತ ಹೊರ ಹೋದ ಗಂಡನೂ ಸಹ ಓಡಿ ಬರುವಂತಹ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು ಶಾಲೆಯಿಂದ ಬಂದರೂ ಅಪ್ಪ ಬಂದಿರುವುದಿಲ್ಲ. ಹೀಗಾಗಿ ಮನೆಯನ್ನು ರಕ್ಷಣೆ ಮಾಡುವ ಎಷ್ಟೋ ಅಪ್ಪಂದಿರು ಸಂಡೇ ಫಾದರ್‌ಗಳಾಗುತ್ತಿದ್ದಾರೆ ಎಂದು ಹೇಳಿದರು.

ಮಹಿಳೆಯರ ಹೃದಯದಲ್ಲಿ ಭಕ್ತಿ ಹಾಗೂ ಮುಖದಲ್ಲಿ ನಿಷ್ಕಲ್ಮಶದಿಂದ ಕೂಡಿರುವ ನಗುವಿದ್ದರೆ ಅವರ ಮನೆಗಳಲ್ಲಿ ಕೇವಲ ಮನುಷ್ಯರಲ್ಲದೇ ದೇವತೆಗಳೂ ಸಹ ವಾಸ ಮಾಡುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಹಾಗೆ ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಗಬಾರದು. ನಗುವಿನಲ್ಲಿ ಶ್ರದ್ಧೆ, ವಿಶ್ವಾಸ ಹಾಗೂ ಭಕ್ತಿ ಇರಬೇಕು. ದೇವತೆಗಳಿಗೂ ಮನುಷ್ಯರಿಗೂ ವ್ಯತ್ಯಾಸ ಹೆಚ್ಚಾಗಿ ಕಂಡುಬರುವುದಿಲ್ಲ. ಯಾವ ಮನಸ್ಸು ಶುದ್ಧವಾಗಿರುತ್ತದೆಯೋ ಅಂತಹ ಮನಸ್ಸಿನಲ್ಲಿ ಒಳ್ಳೆಯ ಮಾತುಗಳು, ಒಳ್ಳೆಯ ಭಾವನೆಗಳು ಬರುತ್ತದೆ ಎಂದು ತಿಳಿಸಿದರು.

ಕುವೆಂಪು ಹೇಳಿರುವ ಹಾಗೆ ಮನಸ್ಸು ಮಲ್ಲಿಗೆಯಂತಿದ್ದರೆ ಮಾತುಗಳು ಪರಿಮಳದಿಂದ ಕೂಡಿರುತ್ತದೆ. ಶುದ್ಧ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಬರುವ ಮಾತು ಹಾಗೂ ನಗು ಎಂತಹ ಸಮಸ್ಯೆಗಳನ್ನೂ ನಿವಾರಿಸಲಿದೆ. ಆದ್ದರಿಂದ ಮನೆಯಲ್ಲಿ ತಾಯಂದಿರನ್ನು ಪ್ರೀತಿಯಿಂದ ನಗುವ ಹಾಗೆ ನೋಡಿಕೊಳ್ಳಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಈ ನಾಡಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೋಟೆ ಕಟ್ಟಿದಾಗ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ತಮ್ಮನ್ನು ತಾವು ಬಲಿಕೊಟ್ಟುಕೊಂಡು ಮಾದರಿಯಾಗಿದ್ದು, ಅಂತಹ ಮಹಾನ್ ವಿಶೇಷ ವ್ಯಕ್ತಿಯನ್ನು ನಾವೆಲ್ಲರೂ ಸ್ಮರಿಸಬೇಕು. ಸಮಾಜ ಕ್ರಿಯಾಶೀಲವಾಗಲು ಹಾಗೂ ಅಭಿವೃದ್ಧಿಯಾಗಲು ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ಲಭಿಸಬೇಕಾಗಿದೆ ಎಂದರು.

ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಶಾಸಕ ಎಲ್.ನಾಗೇಂದ್ರ, ಮೈಸೂರು ಚಾಮರಾಜನಗರ ಒಕ್ಕಲಿಗ ಸಂಘದ ಅಧ್ಯಕ್ಷ ಮರಿಸ್ವಾಮಿ, ಡಾ. ಹೇಮಾ ನಂದೀಶ್, ಪದ್ಮ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ ಶಂಕರೇಗೌಡ, ನಾಗಮಣಿ, ಹೇಮಾ, ಲಕ್ಷ್ಮೀಗೌಡ, ಉಷಾರಾಣಿ, ಅನಿತಾ ಮಾದೇಗೌಡ, ಶೈಲಜಾ, ಪದ್ಮಜಾ, ಕೂರ್ಗಳ್ಳಿ ಮಹದೇವ್, ವಾಸು, ಶಿವರಾಜ್, ವಿಕ್ರಾಂತ್, ರಾಮು, ತೇಜಸ್, ರಾಮಕೃಷ್ಣ , ಚಲುವೇಗೌಡ, ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ, ಅನಿತಾ, ಸುನಂದಾ ಇನ್ನಿತರರಿದ್ದರು.