ಜಿಲ್ಲೆ

ಜಾತಿ ಜನಗಣತಿ ಸಿಎಂ ಸಿದ್ದರಾಮಯ್ಯ ಸ್ಕ್ರ್ಟಿು

ಚಾಮರಾಜನಗರ: ರಾಜ್ಯ ಸರ್ಕಾರ ಕಾಂತರಾಜ್ ಆಯೋಗದ ಮೂಲಕ ನಡೆಸಿರುವ ಜಾತಿ ಜನಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಕ್ರಿಪ್ಟಾಗಿದ್ದು, ವರದಿ ಅಧ್ವಾನದಿಂದ ಕೂಡಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ನೂರೊಂದು ಶೆಟ್ಟಿ ಆರೋಪಿಸಿದರು.

ಕಳೆದ 4-5 ದಿನಗಳಿಂದ ಜಾತಿ ಜನಗಣತಿ ಸದ್ದು ಮಾಡುತ್ತಿದ್ದು, ಆ ವರದಿಯಲ್ಲಿ ವಿವಿಧ ಜಾತಿಗಳ ಅಂಕಿ-ಸಂಖ್ಯೆಗಳು ತಪ್ಪಾಗಿದೆ. ಈ ಕಾರಣಕ್ಕೆ ರಾಜ್ಯಾದ್ಯಂತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸುಮಾರು 20-25 ಲಕ್ಷದಷ್ಟು ಉಪ್ಪಾರ ಜನಸಂಖ್ಯೆ ಇದ್ದು, ಸೋರಿಕೆಯಾದ ವರದಿಯಲ್ಲಿ 7.5 ಲಕ್ಷ ಉಪ್ಪಾರ ಜನಸಂಖ್ಯೆಯನ್ನು ತೋರಿಸಲಾಗಿದೆ. ಈ ಜಾತಿ ಗಣತಿ ಜಾರಿಯಾದರೇ, ಉಪ್ಪಾರ ಸಮುದಾಯದವರಿಗೂ ಅನ್ಯಾಯವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮೈಸೂರು ಮತ್ತು ಚಾಮರಾಜನಗರದಲ್ಲೇ ಉಪ್ಪಾರರು 3 ಲಕ್ಷದಷ್ಟು ಇದ್ದಾರೆ. ಬೆಳಗಾವಿ, ಧಾರವಾಡ ಹಾಗೂ ಇನ್ನಿತರೆ 5-6 ಜಿಲ್ಲೆಗಳಲ್ಲೂ ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೂ ಗಣತಿಯಲ್ಲಿ ಉಪ್ಪಾರರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಮುಸ್ಲಿಂರು, ಕುರುಬರನ್ನು ಓಲೈಕೆ ಮಾಡುವ ಉದ್ದೇಶದಿಂದ ಈ ಗಣತಿಯನ್ನು ಮಾಡಲಾಗಿದೆ. ಕೆಲವು ಹಿಂದುಳಿದ ಸಮುದಾಯದವರು ಜಾತಿಗಣತಿ ಜಾರಿಗೆ ಒತ್ತಾಯ ಮಾಡುತ್ತಿರುವುದು, ಉಪ್ಪಾರ ಸಮುದಾಯದವರಿಗೆ ಮಾಡುವ ಅನ್ಯಾಯವಾಗಿದೆ. ಆಗಾಗಿ ಯಾವುದೇ ಕಾರಣಕ್ಕೂ ವರದಿಯನ್ನು ಒಪ್ಪಿಕೊಳ್ಳಬಾರದು. ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಒಬಿಸಿ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಮುಖಂಡರಾದ ಶಿವಣ್ಣ, ಕೇಬಲ್ ರಂಗಸ್ವಾಮಿ ಹಾಜರಿದ್ದರು.

ಶಾಸಕ ಪುಟ್ಟರಂಗಶೆಟ್ಟಿ ಧ್ವನಿ ಎತ್ತಲಿ:

ರಾಜ್ಯದಲ್ಲಿ ಉಪ್ಪಾರ ಸಮುದಾಯದ ಏಕೈಕ ಶಾಸಕ ಹಾಗೂ ಉಪ್ಪಾರ ಸಂಘದ ರಾಜ್ಯಾಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅವರು ಜಾತಿಗಣತಿಯ ಕುರಿತು ಮೌನಮುರಿದು ಮಾತನಾಡಬೇಕಿದೆ. ಕಾಂಗ್ರೆಸ್ ಪಕ್ಷದ ಲಿಂಗಾಯತ ಮತ್ತು ಒಕ್ಕಲಿಗ ಶಾಸಕರು ಜಾತಿಗಣತಿಯ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಸಿಎಂ ಆಪ್ತರಾಗಿರುವ ಶಾಸಕ ಪುಟ್ಟರಂಗಶೆಟ್ಟಿ, ಉಪ್ಪಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಧ್ವನಿ ಎತ್ತದೇ ಇರುವುದು ಸರಿಯಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡುವ ಉದ್ದೇಶದಿಂದ ಶಾಸಕರು ಮೌನವಾಗಿರಬೇಕು ಎನಿಸುತ್ತದೆ. ಈ ಜಾತಿ ಗಣತಿ ವೈಜ್ಞಾನಿಕವಾಗಿ ಮಾಡಿಲ್ಲವಾದರೂ, ಶಾಸಕರು ತುಟಿ ಬಿಚ್ಚಿಲ್ಲ ಎಂದು ದೂರಿದರು.