ಕೆ.ಸಿ.ಪುಟ್ಟಸಿದ್ದಶೆಟ್ಟಿ  
ಜಿಲ್ಲೆ

ಜಾತಿ ಜನಗಣತಿ ವರದಿ ನಿರ್ಲಕ್ಷಿಸದಿರಿ: ಕೆ.ಸಿ.ಪುಟ್ಟಸಿದ್ದಶೆಟ್ಟಿ

ಮೈಸೂರು: ರಾಜ್ಯ ಹಿಂದುಳಿದ ಆಯೋಗದ ಸಮೀಕ್ಷೆ ಮಾಡಿರುವ ಜಾತಿ ಜನಗಣತಿ ವರದಿಯನ್ನು ನಿರ್ಲಕ್ಷೃ ಮಾಡಬಾರದು ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿದರು.

ರಾಜ್ಯದಲ್ಲಿ ನಡೆದಿರುವ ಜಾತಿ ಜನಗಣತಿಯ ವಿವರ ಹಳೆಯದಾಗಿರಬಹುದು, ಮುಂದಿನ ಗಣತಿ ವೇಳೆ ಹೆಚ್ಚು ವಿಶ್ವಾಸಾರ್ಹವಾದ ಜಾತಿವಾರು ಜನಸಂಖ್ಯೆ ಲಭಿಸಬಹುದು. ಆದರೆ, ಈ ಕಾರಣಕ್ಕಾಗಿಯೇ ಈಗ ನಡೆದಿರುವ ಜಾತಿ ಜನಗಣತಿಯ ವಿವರಗಳನ್ನು ಕಡೆಗಣಿಸಬೇಕೆಂಬ ಬೇಡಿಕೆ ರಾಜಕೀಯವಾಗಿ ಸೂಕ್ತ ಎನಿಸುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು

ರಾಜ್ಯ ಹಿಂದುಳಿದ ಆಯೋಗದ ಕಾಯ್ದೆಯಂತೆ ರಾಜ್ಯ ಸರ್ಕಾರಕ್ಕೆ ಜಾತಿಜನಗಣತಿ ನಡೆಸುವ ಅಧಿಕಾರವಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಯಾವ ಜಾತಿಯನ್ನು ಸೇರಿಸಬೇಕು, ಯಾವ ಜಾತಿಯನ್ನು ಕೈಬಿಡಬೇಕೆಂಬುದನ್ನು ಈ ಸಮೀಕ್ಷೆ ಆಧಾರದಲ್ಲೇ ಮಾಡಬೇಕು ಎಂದೂ ಆಗ್ರಹಿಸಿದರು.

ವೀರಶೈವ ಲಿಂಗಾಯತರು ತಮ್ಮ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.16ಕ್ಕಿಂತ ಹೆಚ್ಚು ಇರುತ್ತದೆ ಎಂದು ನಿರೀಕ್ಷಿಸಿದ್ದರು. ಒಕ್ಕಲಿಗರು ಸಹ ಶೇ.12ಕ್ಕಿಂತ ಹೆಚ್ಚು ಎಂದು ತಿಳಿದಿದ್ದರು. ಆದರೆ, ಲಿಂಗಾಯತರು ಶೇ.11, ಒಕ್ಕಲಿಗರು ಶೇ.10ರಷ್ಟು ಮಾತ್ರ ಇದ್ದಾರೆಂದು ಈಗ ನಿಖರವಾಗಿ ತಿಳಿಸಲಾಗಿದೆ.

ಹೀಗಾಗಿ ಈ ಎರಡೂ ಮೇಲ್ಜಾತಿಗಳು ಈ ಅಂಕಿ ಅಂಶಗಳನ್ನು ಒಪ್ಪುತ್ತಿಲ್ಲ. ಇನ್ನೊಂದು ಪ್ರಬಲ ಜಾತಿಯವರಾದ ಬ್ರಾಹ್ಮಣರು ಕೂಡ ಇಂತಹದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಹೇಳುವ ಪ್ರಕಾರ ಗಣತಿಯಲ್ಲಿ ಲೋಪವಾಗಿಲ್ಲ. ಆದರೂ ಈ ಸಮುದಾಯಗಳ ವಿರೋಧದ ನಡುವೆ ಜಾತಿ ಜನಗಣತಿ ವರದಿಯನ್ನು ಜಾರಿಗೆ ತರುವ ಇಚ್ಛಾಸಕ್ತಿ ಸರ್ಕಾರ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು

ಮರು ಜಾತಿ ಸಮೀಕ್ಷೆಗೆ 90 ದಿನಗಳ ಗಡುವು ನೀಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಕಾಯಕ ಸಮಾಜಗಳು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುತ್ತವೆ. ಇದೇ ವೇಳೆ ಎಷ್ಟೋ ಹಳ್ಳಿಗಳಲ್ಲಿ ಹಿಂದುಳಿದ ವರ್ಗಗಳು ದಲಿತ ಸಮುದಾಯವನ್ನು ತಮ್ಮ ಪ್ರತಿಸ್ಪರ್ಧಿಗಳೆಂದು ಕಾಣುತ್ತಿವೆ. ಇದು ತಪ್ಪಬೇಕು ಎಂದು ಸಲಹೆ ನೀಡಿದರು. ಮುಖಂಡರಾದ ನಂಜಪ್ಪ, ಕೆಂಪಶೆಟ್ಟಿ, ಕೆ.ಜೆ. ಶಿವರಾಜ್, ರಮೇಶ್ ಇದ್ದರು.