ಬೆಳಗಾವಿ: ರಾಜ್ಯದಲ್ಲಿ ಜಾತಿ ಜನಗಣತಿ ಎಂದು ಹೇಳಿಕೊಂಡು ಹಿಂದು-ಮುಸಲ್ಮಾನರನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅವಕಾಶ ಇಲ್ಲದಿದ್ದರೂ, ಈ ಕ್ರಮಕ್ಕೆ ಮುಂದಾಗಿದ್ದಾರೆ. ಬ್ರಿಟಿಷರ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಯಶಸ್ವಿಯಾಗಿ ಅನುಸರಿಸುತ್ತಿದೆ. ನಮ್ಮ ರಾಜ್ಯದಲ್ಲೂ ಅದನ್ನು ನೋಡಿದ್ದೀರಿ.
ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು. ಜಾತಿ ಜನಗಣತಿ ಸಂಬಂಧ ಮೀಸಲಾತಿ ಅನುಷ್ಠಾನ ಮಾಡುವುದೂ ಇಲ್ಲ. ಅದು ಸಾಧ್ಯವೂ ಇಲ್ಲ. 10 ವರ್ಷ ಹಳೆಯ ವರದಿ ವರದಿಯಿದು. ಹಿಂದುಳಿದ ಆಯೋಗದ ಪ್ರಕಾರ 10 ವರ್ಷಕ್ಕೊಮ್ಮೆ ಗಣತಿ ಆಗಬೇಕು.
ವರದಿ ಅನುಷ್ಠಾನ ಹೇಳಿಕೆ ಕೇವಲ ಬೂಟಾಟಿಕೆ. ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.