ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಡಾ. ಕೆ.ಪಿ.ಅಂಶುಮಂತ್, ರವಿಚಂದ್ರ, ಅರುಣೇಶ್, ಮಧುಸೂದನ್, ಹಿರಿಯಣ್ಣ ಇದ್ದರು. 
ಜಿಲ್ಲೆ

ಜಾತಿ ಜನಗಣತಿ ಮರು ಸಮೀಕ್ಷೆ ಕ್ಯಾಬಿನೆಟ್‌ನಲ್ಲಿ ನಿರ್ಧಾರ

ಬಾಳೆಹೊನ್ನೂರು: ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಮರು ಸಮೀಕ್ಷೆ ಮಾಡುವ ಕುರಿತು ಜೂ.12ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಹಳೆಯ ಗಣತಿ ಹತ್ತು ವರ್ಷ ಆಗಿದೆ ಎಂಬ ದೂರು ಇತ್ತು. ಕೆಲವು ಸಮಾಜಗಳ ಮುಖ್ಯಸ್ಥರು, ಮಠಾಧೀಶರು ಜಾತಿ ಜನಗಣತಿ ಮರು ಸಮೀಕ್ಷೆ ಆಗಬೇಕು ಎಂಬ ಬೇಡಿಕೆ ಪರಿಗಣಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತಿತರರು ಸಲಹೆ ನೀಡಿದ್ದಾರೆ. ಎಐಸಿಸಿ ಹೈಕಮಾಂಡ್ ಜಾತಿ ಜನಗಣತಿ ಯಾವ ರೀತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಅಷ್ಟೆ. ಆ ಸಲಹೆಯನ್ನು ಪರಿಗಣಿಸಿ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಮರು ಸಮೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಮರು ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಒಳಮೀಸಲಾತಿಗಾಗಿ ಗಣತಿ ನಡೆದಿದೆ. ಅದೇ ರೀತಿ ಕೆಲವೇ ದಿನಗಳಲ್ಲಿ ಮರು ಸಮೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಗಣತಿ ನಡೆಸಲಾಗುವುದು ಎಂದರು.

ಬೆಂಗಳೂರು ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಪ್ರಕರಣ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಯಾವ ರೀತಿ ಲೋಪವಾಗಿದೆ ಎಂಬ ಬಗ್ಗೆ ತನಿಖೆಯೂ ಆರಂಭವಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸರ್ಕಾರ ಕ್ರಮವನ್ನೂ ಕೈಗೊಂಡಿದೆ. ಎಲ್ಲ ವಿಷಯಗಳಲ್ಲೂ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾದಾಗ ಎಷ್ಟು ಸಾವಿರ ಜನ ಸಾವನ್ನಪ್ಪಿದರು ಎಂಬುದು ಮಾಧ್ಯಮಗಳಿಗೂ ಮಾಹಿತಿ ಸಿಗಲಿಲ್ಲ. ಅಲ್ಲಿನ ಸರ್ಕಾರ ಎಲ್ಲವನ್ನೂ ಮುಚ್ಚಿ ಹಾಕಿದೆ. ಆಗ ಯಾರ ವಿರುದ್ಧ ಕ್ರಮ ಆಗಿದೆ. ಇಂತಹ ಘಟನೆಗಳಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕಾರಣ ಬೆರೆಸಲು ಹೋಗಬಾರದು. ಯಾವುದೇ ಸರ್ಕಾರವಿರಲಿ, ಯಾರೇ ಇರಲಿ ಜವಾಬ್ದಾರಿ ಇದ್ದವರು ಅದರ ಹೊಣೆ ಹೊರುತ್ತಾರೆ. ಇಂಥ ಘಟನೆ ಆದ ತಕ್ಷಣ ಮುಖ್ಯಮಂತ್ರಿ, ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಎಂದು ಕೇಳಿದರೆ ಅದಕ್ಕೆ ಅರ್ಥವಿರಲ್ಲ. ಪಹಲ್ಗಾಮ್ ಘಟನೆ ಆಗಿದ್ದು ಭದ್ರತೆಯ ವೈಲ್ಯದಿಂದ. ಆಗ ನಾವು ಪ್ರಧಾನಮಂತ್ರಿಗಳ ರಾಜೀನಾಮೆ ಕೇಳಿಲ್ಲ. ಅದರ ಬದಲು ಕಾಂಗ್ರೆಸ್ ದೇಶದ ಜತೆ ನಿಂತಿದೆ. ಒಗ್ಗಟ್ಟಾಗಿ ಈ ಘಟನೆ ಖಂಡಿಸಬೇಕು ಎಂದು ನಾವು ಹೇಳಿದ್ದೆವು. ಬಿಜೆಪಿಯವರ ತಲೆಯಲ್ಲಿ ದಿನದ 24 ಗಂಟೆಯೂ ರಾಜಕಾರಣ ಓಡುತ್ತಿರುತ್ತದೆ. ಜನಹಿತದ ಬಗ್ಗೆ ಅವರಿಗೆ ಚಿಂತೆ ಇರುವುದಿಲ್ಲ ಎಂದರು.

ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಜಾನ್ ಡಿಸೋಜಾ, ಕಾಂಗ್ರೆಸ್ ವಕ್ತಾರ ಹಿರಿಯಣ್ಣ, ಬಿ.ಸಿ.ಸಂತೋಷ್‌ಕುಮಾರ್ ಇತರರಿದ್ದರು.