oppo_2 
ಜಿಲ್ಲೆ

ಜಾತಿ ಗಣತಿ ವರದಿ ಜಾರಿ ಮಾಡಲಿ

ಕಲಬುರಗಿ: ರಾಜ್ಯದಲ್ಲಿ ಆರ್ಥಿಕ, ಶೈಕ್ಷಣಿಕ ಮತ್ತು ಜಾತಿ ಜನಾಂಗದ ಸ್ಥಿತಿಗತಿಗಳ ಅಂಕಿ ಅಂಶಗಳುಳ್ಳ ನ್ಯಾ.ಕಾಂತರಾಜ ಅವರ ನೇತೃತ್ವದ ಸಮಿತಿಯ ವರದಿಯನ್ನು ಅ.೧೮ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಒಪ್ಪಿ, ಜಾರಿಗೆ ತರಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಆಗ್ರಹಿಸಿದರು.
೧೫೯ ಕೋಟಿ ರೂ. ಖರ್ಚು ಮಾಡಿ ರಾಜ್ಯದಲ್ಲಿ ಜಾತಿ ಗಣತಿ ನಡೆಸಿದ್ದು, ಶೀಘ್ರ ಜಾರಿಗೆ ಆಗ್ರಹಿಸಿ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಸಮಾವೇಶವನ್ನು ಬೆಂಗಳೂರಿನಲ್ಲಿ ಅ.೧೬ರಂದು ಹಮ್ಮಿಕೊಂಡಿದ್ದು, ಅದಕ್ಕೂ ಮುನ್ನ ಅ.೧೪ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿಗಣತಿ ಕೇವಲ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲ. ವರದಿಯಲ್ಲಿ ರಾಜ್ಯದ ಏಳು ಕೋಟಿ ಜನರಲ್ಲಿ ಆರುವರೆ ಕೋಟಿ ಜನರ ಸಮೀಕ್ಷೆಯ ಅಂಕಿ ಸಂಖ್ಯೆ ಇದೆ. ಸಮ ಸಮಾಜ ನಿರ್ಮಿಸಲು ಬಸವಣ್ಣ, ಅಂಬೇಡ್ಕರ್ ಸಂವಿಧಾನ ಆಶಯ ಮೈಗೂಡಿಸಿಕೊಂಡ ಸಿಎಂ ಸಿದ್ದರಾಮಯ್ಯ ಅಧಿಕಾರದ ಒತ್ತಡಕ್ಕೆ ಮಣಿಯದೆ ಸಮೀಕ್ಷಾ ವರದಿ ಜಾರಿ ಮಾಡಿ, ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ವಿರೋಧಿಗಳಾದ ಬಿಜೆಪಿ, ಜೆಡಿಎಸ್‌ನವರು ಬಡವರಾಗಿಯೇ ಇರಲು ಬಯಸುತ್ತಾರೆ ಎಂದು ಟೀಕಿಸಿದರು. ಹಿಂದೆ ವೀರಪ್ಪ ಮೋಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಶೇ.೭೩ಕ್ಕೆ ಮೀಸಲು ಮಿತಿ ಹೆಚ್ಚಿಸಲು ಪ್ರಯತ್ನಿಸಿದ್ದರು. ಆದರೆ ಪ್ರಸ್ತುತ ಸಿದ್ದರಾಮಯ್ಯ ಆ ಪ್ರಯತ್ನ ಪೂರ್ಣಗೊಳಿಸಿ ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಅ.೧೪ರAದು ಕಲಬುರಗಿಯಲ್ಲಿ ನಡೆಯುವ ಹಕ್ಕೊತ್ತಾಯ ಮನವಿ ಪತ್ರ ಸಲ್ಲಿಸಲು ಮತ್ತು ೧೬ರಂದು ಬೆಂಗಳೂರನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲೊಳ್ಳಬೇಕೆಂದು ಮನವಿ ಮಾಡಿದರು.
ಪಿಡ್ಡಪ್ಪ ಜಾಲಗಾರ, ಯಾಧವ, ಮಲ್ಲಿಕಾರ್ಜುನ ಪೂಜಾರಿ, ಹಣಮಯ್ಯ ಆಲೂರು, ಶೇಖರಸಿಂಗ, ಈರಣ್ಣ ಬಡಿಗೇರ, ಆಜಾಮ್ ಶಹಾ, ಸ್ವಾಮಿ ಬುರಬುರೆ, ಸಂಜೀವ ಕಟ್ಟಳ್ಳಿ ಇದ್ದರು.