ಚಿಕ್ಕಮಗಳೂರು: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ಸೆ. ೨೨ರಿಂದ ಅ. ೭ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಈಡಿಗ ಮತ್ತು ಬಿಲ್ಲವ ಸಮುದಾಯದವರು ಜಾತಿ ಕಲಂನಲ್ಲಿ ಈಡಿಗ ಹಾಗೂ ಬಿಲ್ಲವ ಎಂದು ಬರೆಸುವಂತೆ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ಮನವಿ ಮಾಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಮತ್ತು ಬಿಲ್ಲವ ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯಬೇಕಾದಲ್ಲಿ ಜಾತಿ ಗಣತಿ ಸಂದರ್ಭದಲ್ಲಿ ಈಡಿಗ ಮತ್ತು ಬಿಲ್ಲವ ಸಮಾಜದವರು ಕೆಲಸಗಳನ್ನು ಬದಿಗೊತ್ತಿ ಮಹತ್ವದ ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಗಣತಿದಾರರು ಮನೆಗೆ ಬಂದಾಗ ಯಾವುದೇ ಕಾರಣಕ್ಕೂ ಕೋಟ್ಯಾನ್, ಅಂಚನ್, ಸಾಲಿಯಾನ್, ಬಂಗೇರ, ಸುವರ್ಣ, ಅಮೀನ್, ಕರ್ಕೇರ ಎಂದು ಸಮೀಕ್ಷೆಯಲ್ಲಿ ಬರೆಸಬಾರದು. ಬಿಲ್ಲವರೆಂದೇ ನಮೂದಿಸಬೇಕು. ಕಲಂ ೯ ರಲ್ಲಿ ಈಡಿಗ ಎಂದು, ಕಲಂ ೧೦ ರಲ್ಲಿ ಬಿಲ್ಲವ ಎಂದು ನಮೂದಿಸಬೇಕು. ಈ ರೀತಿ ಮಾಡದೇ ನಮ್ಮ ಬರಿ ಗೋತ್ರಗಳನ್ನು ನಮೂದಿಸಿದರೆ ಒಂದೊAದೇ ಉಪಪಂಗಡಗಳು ತಮ್ಮ ಮೂಲ ಹೆಸರಿನಿಂದ ಬೇರ್ಪಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಎಂಬ ಜಾತಿ ಇಲ್ಲ. ಆದ್ದರಿಂದ ಸಮಾಜ ಬಾಂಧವರು ಈ ಮೇಲಿನ ವಿಷಯಗಳನ್ನು ಮನವರಿಕೆ ಮಾಡಿಕೊಂಡು ಜಾತಿ ಸಮೀಕ್ಷೆ ನಡೆಸುವಾಗ ಬಿಲ್ಲವರು ಬಿಲ್ಲವ ಎಂದೇ ನಮೂದಿಸಿ. ಈಡಿಗರು ಈಡಿಗ ಎಂದೇ ಸಮೂದಿಸಬೇಕು ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ರೂಪುಗೊಂಡು ಅನುಷ್ಠಾನಗೊಳ್ಳುವುದರಿಂದ ಜಾತಿ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ನಮ್ಮ ಸಮುದಾಯದವರು ಜಾತಿ ಕಲಂನಲ್ಲಿ ಬಿಲ್ಲವ ಹಾಗೂ ಈಡಿಗ ಎಂದಷ್ಟೇ ಬರೆಸಬೇಕು. ಯಾವುದೇ ಉಪ ಜಾತಿಗಳನ್ನು ಬರೆಸಬಾರದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ನಾರಾಯಣಗುರು ನಿಗಮವನ್ನು ಸ್ಥಾಪಿಸಿದ್ದು, ನಿಗಮಕ್ಕೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. ಸರ್ಕಾರ ಕೂಡಲೇ ನಾರಾಯಣಗುರು ನಿಗಮಕ್ಕೆ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸು ಪೂಜಾರಿ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಕೆ.ಸಿ.ಗುಣಶೇಖರ್, ಜಿಲ್ಲಾ ಶ್ರೀನಾರಾಯಣ ಗುರು ಸಮಿತಿಯ ಅಧ್ಯಕ್ಷ ಎಂ.ಕೃಷ್ಣಪ್ಪ, ಒಕ್ಕೂಟದ ಉಪಾಧ್ಯಕ್ಷ ಕೆ.ರಾಜು ಉಪಸ್ಥಿತರಿದ್ದರು.