ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಜಾತಿ ಉಲ್ಲೇಖ ಮಾಡಿ ಮಾತನಾಡುವುದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ನಾಯಕರ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಿದೆ ಎಂದು ಈ ರೀತಿ ಟೀಕೆ-ಟಿಪ್ಪಣಿ ಮಾಡುವುದು ಸರಿಯಲ್ಲ. ಈ ರೀತಿಯ ಹೇಳಿಕೆ-ಪ್ರತಿ ಹೇಳಿಕೆಗಳನ್ನು ಕೂಡಲೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ರಾಜಕಾರಣ ಕೀಳು ಮಟ್ಟಕ್ಕೆ ಹೋಗುತ್ತಿದೆ. ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಾತನಾಡುವುದನ್ನು ನಿಲ್ಲಿಸಬೇಕು. ಈ ರೀತಿಯ ಮಾತುಗಳು ಅವರ ವ್ಯಕ್ತಿತ್ವಕ್ಕೂ ಗೌರವ ತರುವುದಿಲ್ಲ. ಕೂಡಲೇ ಇದಕ್ಕೆ ಪೂರ್ಣ ವಿರಾಮ ಹಾಕಬೇಕು. ಬಜೆಟ್ನಲ್ಲಿ ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ರ್ಚಚಿಸುತ್ತೇನೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿ ದುರ್ಬಳಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ಬರೀ ಸುಳ್ಳು ಆರೋಪಗಳನ್ನು ಮಾಡುವ ಕೆಲಸ ನಡೆದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಹ ಇದೇ ರೀತಿ ಆರೋಪ ಮಾಡಿದ್ದರು. ಲೋಕಾಯುಕ್ತಕ್ಕೆ ದೂರು ನೀಡಿ ಎಂದರೆ ಹಿಂದೇಟು ಹಾಕಿದ್ದರು. ಇಲ್ಲಿಯವರೆಗೂ ಲೋಕಾಯುಕ್ತಕ್ಕೆ ದೂರು ನೀಡಿಲ್ಲ. ಸೂಕ್ತ ಆಧಾರಗಳನ್ನು ಇಟ್ಟುಕೊಂಡು ಆರೋಪ ಮಾಡಬೇಕು ಎಂದರು.
ಪ್ರಲ್ಹಾದ ಜೋಶಿ ಮುಂದಿನ ಸಿಎಂ ವಿಚಾರವಾಗಿ ಪಕ್ಷದ ವೇದಿಕೆಯಲ್ಲಿ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದಷ್ಟೇ ಶೆಟ್ಟರ್ ಹೇಳಿದರು.