ಜಿಲ್ಲೆ

ಜಾಜೂರಿನಲ್ಲಿ ಪ್ರಾಚೀನ ಶಿಲಾ ಶಾಸನ ಸಂರಕ್ಷಣೆ

ರಾಜಣ್ಣ

ಗ್ರಾಮಾಂತರ: ಅರಸೀಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ಪ್ರಾಚೀನ ಶಿಲಾ ಶಾಸನವನ್ನು ಗ್ರಾಮದ ಹಿರಿಯರು ಮತ್ತು ಅರಸೀಕೆರೆ ತಾಲೂಕು ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಸಮಿತಿ ಪತ್ತೆಹಚ್ಚಿ ಸಂರಕ್ಷಿಸಿದೆ.

ತಾಲೂಕಿನಾ ಕಸಬಾ ಹೋಬಳಿಯ ಜಾಜೂರು(ಶಾಸನೋಕ್ತ ರಾಜೂರು) ಅರಸೀಕೆರೆ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲಿ ಒಂದು. ಹೊಯ್ಸಳರ ಎರಡನೇ ವೀರ ಬಲ್ಲಾಳನ ಕಾಲದಲ್ಲಿ ಅರಸೀಕೆರೆ ಭಂಡಾರವಾಡವಾಗಿ, ಉಪ ರಾಜಧಾನಿಯಾಗಿ, ತೆಂಕಣ ಐಹೊಳೆ ಎಂದೇ ಪ್ರಸಿದ್ಧವಾಗಿತ್ತು. ಅದಕ್ಕೆ ಹೊಯ್ಸಳ ರಾಜ ಎರಡನೇ ಬಲ್ಲಾಳನ ಪಟ್ಟದರಿಸಿ ಉಮಾದೇವಿಯ ಕೊಡುಗೆ ಅಪಾರವಾಗಿದೆ.

ಹನ್ನೆರಡನೇ ಶತಮಾನದಲ್ಲಿ ಜಾಜೂರು ರಾಜವೂರು ಎಂದು ಪ್ರಸಿದ್ಧಿ ಪಡೆದಿದ್ದು ಕಾಳಮುಖ ಶೈವರ ಶಕ್ತಿ ಕೇಂದ್ರವಾಗಿತ್ತು. ಶಿವಶಕ್ತಿ ಚಂದ್ರಭೂಷಣರು ಅನ್ವಯಾಗತವಾಗಿ ಅರಸೀಕೆರೆಯ ಶೈವಸ್ಥಾನ ದತ್ತಿ ಗ್ರಾಮವಾದ ಜಾಜೂರನ್ನು(ರಾಜವೂರು) ಧರ್ಮದಿಂದ ಪಾಲಿಸುತ್ತಿದ್ದರು. ಇದೇ ಸಮಯದಲ್ಲಿ ಸಿರಿವಂತ ಕಲ್ಲಿಸೆಟ್ಟಿ ಎಂಬ ಶಿವಭಕ್ತನು ಕನಸೊಂದನ್ನು ಕಂಡು ಅದನ್ನು ನನಸು ಮಾಡಲೆಂದು ಜಾಜೂರಿನಲ್ಲಿ(ರಾಜವೂರು)ನಲ್ಲಿ ಸುಂದರವಾದ ಕಲಿದೇವರ ದೇವಾಲಯವನ್ನು ಕಟ್ಟಿಸಿದನು. ಕಲ್ಲಿಸೆಟ್ಟಿಯ ಮಗಳು ಬಿಜ್ಜವೆ ಅವಳ ಗಂಡ ಶಂಕರದೇವ ಇವರಿಬ್ಬರ ಮಗ ಅಂದರೆ ಕಲ್ಲಿಸೆಟ್ಟಿಯ ಮೊಮ್ಮಗ ಎರಹಿಸೆಟ್ಟಿ. ದೇವಸ್ಥಾನದ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಎರಹಿಸೆಟ್ಟಿಯನ್ನು ನೇಮಿಸಲಾಯಿತು.

ದೇವಾಲಯದ ನಿತ್ಯ ಪೂಜೆ, ನೈವೇದ್ಯ, ನಂದಾದೀಪ ಮತ್ತು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಫಲವತ್ತಾದ ಗದ್ದೆ, ಏರಿ ಹಿಂದಿನ ಭೂಮಿ, ಊರ ಮುಂದಣ ಬೆದ್ದಲು ಜಮೀನುಗಳನ್ನು ದಾನವಾಗಿ ನೀಡಲಾಗಿತ್ತು. ಕಲಿದೇವರ ದೇವಾಲಯದ ಬಳಿ ಎತ್ತರವಾದ ಕೋಟೆಯೊಂದನ್ನು ನಿರ್ಮಿಸಲಾಗಿತ್ತು. ಜಾಜೂರಿನ ಬರ್ಮಗೌಡ ಅವನ ಮಕ್ಕಳಾದ ಬಿಟ್ಟಿಗೌಡ, ಬೂವಗೌಡ, ಬೂಮಗೌಡ, ಮಾದಿಗೌಡ ಎಂಬ ಕಲಿಗಳು ಪ್ರತಾಪಿಗಳು, ವಿನಯವಂತರು ಶಾಂತಿಯಿಂದ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. 12ನೇ ಶತಮಾನದಲ್ಲಿ ಜಾಜೂರು ಸುಂದರವಾದ ತುಂಬಿದ ಕೆರೆಯಿಂದ, ವನಗಳಿಂದ, ತೆಂಗು -ಅಡಕೆಗಳಿಂದ ನಯನ ಮನೋಹರವಾಗಿತ್ತು. ಇಷ್ಟೆಲ್ಲಾ ಮಾಹಿತಿಗಳನ್ನು ನಮಗೆ ನೀಡುವುದರ ಜತೆಗೆ ಹೊಯ್ಸಳರ ದೊರೆಗಳಾದ ವಿನಯಾದಿತ್ಯ, ಎರೆಯಂಗ, ವಿಷ್ಣುವರ್ಧನ ನರಸಿಂಹ ಹಾಗೂ ಎರಡನೇ ವೀರ ಬಲ್ಲಾಳನವರೆಗಿನ ವಂಶಾವಳಿಯನ್ನು ಹಾಗೂ ಎರಡನೇ ವೀರಬಲ್ಲಾಳನು ಕೊಂಕಣ, ಪಾಂಡ್ಯ, ಸೇವುಣ ರಾಜರುಗಳನ್ನು ಗೆದ್ದು ಕದನ ಪ್ರಚಂಡ ಶ್ರೀಪ್ರತಾಪ ಚಕ್ರವರ್ತಿ ಸೇರಿದಂತೆ ಹಲವಾರು ಬಿರುದುಗಳನ್ನು ಪಡೆದು ವೈಭವದಿಂದ ಆಡಳಿತ ನಡೆಸುತ್ತಿದ್ದ ಎಂಬೆಲ್ಲಾ ವಿಚಾರಧಾರೆಗಳನ್ನು ಇಂದಿಗೂ ಕಣ್ಣಿಗೆ ಕಟ್ಟುವಂತೆ ನಮಗೆ ತಿಳಿಯಪಡಿಸುವುದು ಜಾಜೂರಿನ ಪೂರ್ವ ದಿಕ್ಕಿನಲ್ಲಿ ದೊರೆತಿರುವ ಶಾಸನ.

ಕಾಲಗರ್ಭದಲ್ಲಿ ಲೀನವಾದ ದೇಗುಲ: 12ನೇ ಶತಮಾನದಲ್ಲಿ ಕಲ್ಲಿಸೆಟ್ಟಿ ನಿರ್ಮಿಸಿದ ಕಲಿದೇವರ ದೇವಾಲಯವಾಗಲಿ, ಕೋಟೆಯಾಗಲಿ ಇಂದು ನೋಡಲು ಸಾಧ್ಯವಿಲ್ಲ. ಎಲ್ಲವೂ ಬಿದ್ದು ಕಾಲಗರ್ಭದಲ್ಲಿ ಹೂತುಹೋಗಿವೆ. ಅವುಗಳ ಅಳಿದುಳಿದ ಅವಶೇಷಗಳು ಅನಾಥವಾಗಿ ಬಿದ್ದಿರುವ ಪಳೆಯುಳಿಕೆಗಳನ್ನು ಇಂದಿಗೂ ಕಾಣಬಹುದು. ಅವುಗಳ ಮೇಲೆ ಮುಳ್ಳಿನ ಪೊದೆಗಳು ಬೆಳೆದು ಎಲ್ಲವೂ ಮುಚ್ಚಿ ಹೋಗಿವೆ. ಇಂತಹ ಜಾಗಕ್ಕೆ ನೂರಾರು ವರ್ಷಗಳಿಗೂ ಹಿಂದೆಯೇ ಬಿ.ಎಲ್.ರೈಸ್ ಎಂಬ ಬ್ರಿಟಿಷ್ ಅಧಿಕಾರಿ ಭೇಟಿ ನೀಡಿ ಇಲ್ಲಿನ ಶಾಸನದ ಬಗ್ಗೆ ದಾಖಲೆಗಳನ್ನು ರಚಿಸಿಟ್ಟು ಹೋಗಿರುವುದು ನಾವು ಇಂದು ಹಿಂದಿನ ಇತಿಹಾಸವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ.

ಸಂಶೋಧಕನಿಂದ ಐತಿಹಾಸಿಕ ದಾಖಲೆಗಳ ಹುಡುಕಾಟ: ಈ ಶಾಸನದ ಬಗ್ಗೆ ಸ್ಥಳೀಯರಿಗೆ ಇರುವ ನಿರ್ಲಕ್ಷ ಮತ್ತು ಮೂಢನಂಬಿಕೆಗಳಿಂದಾಗಿ ಶಾಸನ ಪೊದೆಯಲ್ಲಿ ಎಸೆಯಲ್ಪಟ್ಟಿತ್ತು. ಐತಿಹಾಸಿಕ ದಾಖಲೆಗಳನ್ನು ಹುಡುಕಿ ಹೊರಟ ಸಂಶೋಧಕ ಡಾ.ಹರೀಶ್‌ಕುಮಾರ್ ಹೆಂಜಗೊಂಡನಹಳ್ಳಿ ಅವರು ಜಾಜೂರಿನ ಈ ಶಾಸನವನ್ನು ಗುರುತಿಸಿ ಅದನ್ನು ಸಂರಕ್ಷಿಸಲೆಂದು ಸ್ಥಳೀಯರ ಸಹಕಾರ ಯಾಚಿಸಿ ಶಾಸನದ ಮಹತ್ವ ತಿಳಿಸಿಕೊಟ್ಟರು.

ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಮೂಲ ಕರ್ತವ್ಯಗಳಲ್ಲಿ ಒಂದು ಎಂದು ಅರಿವು ಮೂಡಿಸಿದರು. ಇದರಿಂದ ಎಚ್ಚೆತ್ತು ಗ್ರಾಮದ ಹಾಲಪ್ಪ ಅವರು ರಮೇಶಣ್ಣ ಅವರ ಸಹಕಾರದಿಂದ ಪೊದೆಯಿಂದ ಶಾಸನವನ್ನು ಹೊರತೆಗೆದು ಸ್ವಚ್ಛಗೊಳಿಸಿ ಅದನ್ನು ಪಕ್ಕದಲ್ಲಿಯೇ ಇರುವ ಪ್ರಾಚೀನ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣಕ್ಕೆ ತಂದು ಇರಿಸಿದ್ದಾರೆ.

ಈ ಶಾಸನದಲ್ಲಿರುವ ಮಾಹಿತಿಗಳನ್ನು ಗ್ರಾಮದ ಮುಖ್ಯಸ್ಥರಿಗೆ ತಿಳಿಸಿ ನಮ್ಮ ಗ್ರಾಮದ ಇತಿಹಾಸ, ಸಂಸ್ಕೃತಿ ಮತ್ತಿತರ ವಿಚಾರಧಾರೆಗಳನ್ನು ಅವರಿಗೆ ಮನಮುಟ್ಟುವಂತೆ ಅರಿವು ಮೂಡಿಸಲಾಗಿ ಗ್ರಾಮದ ಗೌಡರುಗಳಾದ ಸಿದ್ದಪ್ಪ, ಶಶಿಧರ್, ಶೇಖರಪ್ಪ, ರಂಗನಾಥಸ್ವಾಮಿಯ ಅರ್ಚಕರಾದ ರಂಗನಾಥ್, ಗ್ರಾಮದ ಶಿವಲಿಂಗಪ್ಪ, ಲೋಹಿತ್, ಜಗದೀಶ್ ಸೇರಿದಂತೆ ಹಲವು ಮುಖಂಡರು ಈ ಶಾಸನವನ್ನು ಸಂರಕ್ಷಣೆ ಮಾಡಿ ಪ್ರಕೃತಿ ಹೊಡೆತದಿಂದ ಅದನ್ನು ರಕ್ಷಿಸಲು ಮುಂದೆ ಬಂದರು. ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆಯ ವಿದ್ಯಾರ್ಥಿಗಳು ಹಾಗೂ ಸಂಶೊಧಕರಾದ ಡಾ.ಹರೀಶ್ ಕುಮಾರ್, ಡಾ.ರಾಜೇಶ್ ಖನ್ನಾ, ರಾಘವೇಂದ್ರ ಗ್ರಾಮಸ್ಥರ ಜತೆ ಸೇರಿ ಶಾಸನವನ್ನು ಸುರಕ್ಷಿತ ಸ್ಥಳದಲ್ಲಿ ಸಂರಕ್ಷಣೆ ಮಾಡಲಾಯಿತು.