ಜಿಲ್ಲೆ

ಜಾಜಿ ಮಲ್ಲಿಗೆ ಕವಿ ಪಾತ್ರೋಟಗೆ ಅಪಮಾನ...?

ಬಾಗಲಕೋಟೆ: ವಿಶ್ವವಿಖ್ಯಾತ ಮೈಸೂರ ದಸರಾ ಪ್ರಧಾನ ಕವಿಗೋಷ್ಠಿ ಆಯೋಜಕರು ನಾಡಿನ ಹಿರಿಯ ಹಾಗೂ ಜಾಜಿ ಮಲ್ಲಿಗೆ ಕವಿ ಖ್ಯಾತಿಯ ಡಾ.ಸತ್ಯಾನಂದ ಪಾತ್ರೋಟ ಅವರಿಗೆ ಅಪಮಾನ ಮಾಡಿದೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಅಕ್ಟೋಬರ್ 3 ರಂದು ನಡೆಯುವ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿವ ಕವಿಗಳ ಪಟ್ಟಿಯಲ್ಲಿ ಬಾಗಲಕೋಟೆ ನಗರದ ಸತ್ಯಾನಂದ ಪಾತ್ರೋಟ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಆದರೆ, ಈ ಬಗ್ಗೆ ಕವಿಗಳಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ, ಅವರಿಂದ ಒಪ್ಪಿಗೆಯನ್ನು ಪಡೆದಿಲ್ಲ.
ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಕಟವಾಗಿರುವ ಬಗ್ಗೆ ಬೇರೆಯವರಿಂದ ಮಾಹಿತಿ ತಿಳಿದ ಸತ್ಯಾನಂದ ಪಾತ್ರೋಟ ಅವರು ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ತಮ್ಮ ನೋವನ್ನು -ೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ಒಪ್ಪಿಗೆ ಇಲ್ಲದೇ ಅದ್ಹೇಗೆ ನನ್ನ ಹೆಸರು ಈ ಗೋಷ್ಠಿಗೆ ಸೇರಿಸಿದರು? ಆಯೋಜಕರೇ ಇದನ್ನು ಸ್ಪಷ್ಟಪಡಿಸಬೇಕು. ಅದು ಅಲ್ಲದೆ ಈಗಾಗಲೇ ಈ ಪ್ರಧಾನ ಕವಿಗೋಷ್ಠಿಗೆ ಕವಿಯಾಗಿ ಮೂರು ಸಲ ಭಾಗವಹಿಸಿದ್ದೇನೆ. ಒಂದು ಸಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಒಪ್ಪಿಗೆ ಇಲ್ಲದ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ಆತ್ಮವಂಚನೆಯಾಗುತ್ತದೆ. ಭಾಗವಹಿಸಿದವರನ್ನೇ ಪದೇ ಪದೇ ಆಹ್ವಾನಿಸುವುದಕ್ಕಿಂತ ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂದು ಆಯೋಜಕರಿಗೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಎಲ್ಲರ ಮನೆ ಮಾತಾಗಿರುವ ಬಡವನಾದರೆ ಏನು ಪ್ರಿಯೆ ಕೈತುತ್ತು ತಿನ್ನಿಸುವೆ ಎನ್ನುವ ಕವನ ರಚಿಸಿರುವ ಜಾಜಿ ಮಲ್ಲಿಗೆ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತ್ಯಾನಂದ ಪಾತ್ರೋಟ ಅವರಿಗೆ ಆಯೋಜಕರು ಯಾವುದೇ ಮಾಹಿತಿ ನೀಡದೇ ಗೋಷ್ಠಿಗೆ ಅವರ ಹೆಸರು ಹಾಕಿರುವ ಬಗ್ಗೆ ಅಭಿಮಾನಿಗಳು ಕಮೆಂಟ್ ನಲ್ಲಿ ಆಕ್ರೋಶದ ಪೋಸ್ಟ್ ಗಳನ್ನು ಹಾಕಿದ್ದಾರೆ.