ಜಿಲ್ಲೆ

ಜಾಗೇರಿ ವ್ಯಾಪ್ತಿಯ ಹಳ್ಳಿಗಳಿಗೆ ಹೆಚ್ಚುವರಿ ಬಸ್ ನಿಯೋಜಿಸಿ

ಕೊಳ್ಳೇಗಾಲ: ತಾಲೂಕಿನ ಜಾಗೇರಿ ಸುತ್ತಮುತ್ತಲ ಹಳ್ಳಿಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜನೆ ಮಾಡಬೇಕೆಂದು ಇಲ್ಲಿನ ರೈತ ಸಂಘದ ಜತೆ ವಿದ್ಯಾರ್ಥಿಗಳು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಘಟಕಕ್ಕೆ ಸೋಮವಾರ ಭೇಟಿ ನೀಡಿ ಮನವಿ ಮಾಡಿದ್ದಾರೆ.


ಕೆಎಸ್‌ಆರ್‌ಟಿಸಿ ಬಸ್ ಘಟಕಕ್ಕೆ ತೆರಳಿದ ರೈತ ಸಂಘದ ಪದಾಧಿಕಾರಿಗಳು ಹಾಗೂ 30ಕ್ಕೂ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಕೆಎಸ್‌ಆರ್‌ಟಿಸಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಎಂ.ನಾಗರಾಜು ಮೂಲಕ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿನಿತ್ಯವೂ ಜಾಗೇರಿ ಸಮೀಪದ ಬರುವ ಒಡೆಯರ ಕಟ್ಟೆ, ಶಿಲುವೈಪುರ ಸಿ.ಆರ್.ನಗರ, ಪಾಸ್ಕಲ್‌ನಗರ, ಆರ್.ಬಿ ತಾಂಡ, ಟಿ.ಜಿ. ದೊಡ್ಡಿ, ಹಳೇಕೋಟೆ, ಶಾಂತಿನಗರ, ಐದು ರೋಡ್‌ಗಳಿಂದ ವಿದ್ಯಾರ್ಥಿಗಳು ಕೊಳ್ಳೇಗಾಲ ಪಟ್ಟಣದ ವಿವಿಧ ಶಾಲೆ-ಕಾಲೇಜುಗಳಿಗೆ ಆಗಮಿಸುತ್ತಾರೆ. ಈಗಾಗಲೇ ಬರುವ ಬಸ್ ಸೂಕ್ತ ಸಮಯಕ್ಕೆ ಬಾರದೇ ಶಾಲಾ-ಕಾಲೇಜಿಗೆ ಸಕಾಲಕ್ಕೆ ಹಾಜರಾಗಲು ತೊಂದರೆಯಾಗಿದೆ.


ಆದ್ದರಿಂದ ನಿತ್ಯವೂ ಶಿಲುವೈಪುರದಿಂದ ಒಡೆಯರ ಕಟ್ಟೆಮಾರ್ಗವಾಗಿ ಬೆಳಗ್ಗೆ 7.15 ಗಂಟೆಗೆ ಬಸ್ ಅನ್ನು ಕೊಳ್ಳೇಗಾಲದ ಕಡೆಗೆ ಬಿಡಬೇಕು. ಅಂತೆಯೇ, ಸಂಜೆ ಕೊಳ್ಳೇಗಾಲದ ಕಡೆಯಿಂದ ವಿದ್ಯಾರ್ಥಿಗಳು ಹಿಂದಿರುಗಲು ಸಂಜೆ 4.30 ಗಂಟೆಗೆ ಜಾಗೇರಿ ಕಡೆಗೆ ಬಸ್ ಬಿಡುವಂತೆ ಮನವಿ ಮಾಡಿದಲ್ಲದೆ, ಮಧ್ಯಾಹ್ನದ ವೇಳೆಗೂ ಜಾಗೇರಿ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಂದು ಒತ್ತಾಯಿಸಿದರು. ಅಂತೆಯೇ, ಪಟ್ಟಣದ ಮುಡಿಗುಂಡ ಆದರ್ಶ ಶಾಲೆ ತೆರಳುವ ಮಕ್ಕಳಿಗೆ ಬೆಳಗ್ಗೆ 9.15ರಿಂದ ಹೊಸಅಣಗಳ್ಳಿ ಕಡೆಯಿಂದ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.


ರೈತ ಸಂಘ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಬಸವರಾಜು ಮಧುವನಹಳ್ಳಿ, ಪೆರಿಯನಾಯಿಗಂ, ಲಾರೆನ್ಸ್ ವಿದ್ಯಾರ್ಥಿಗಳಾದ ಮುರುಗನ್, ಅರುಣ್‌ಕುಮಾರ್, ಆನಂದ್‌ನಾಯ್ಕ, ಸೋನಿಯಾ, ವಿನೋದಿನಿ, ಪೂಜಾ, ಭಾವನಿ, ಪವಿತ್ರಾ, ಅರವಿಂದ್, ಸುನೀಲ್, ಪ್ರವೀಣ್, ಜಯಶೀಲನ್, ಜಬೀನ್ ಜಪಮಾಲೆ, ಪವಿತ್ರಾ ಅಂತೋಣಿಯಮ್ಮ, ಅಜಯ್, ಸತೀಶ್, ಸಂತೋಷ್, ನಂದ ಕುಮಾರ್ ಇತರರು ಇದ್ದರು.