ಜಿಲ್ಲೆ

ಜಾಗೃತಿ ಮೂಡಿಸಿದರೂ ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಕೆ

ಬೇಲೂರು: ಪಟ್ಟಣದ ಸ್ವಚ್ಛತೆಗಾಗಿ ಸರ್ಕಾರದ ಆದೇಶದಂತೆ ಪ್ಲಾಷ್ಟಿಕ್ ನಿಷೇಧಿಸಿದ್ದರೂ ಕೆಲವರು ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ವಿಷಾದನೀಯ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಬೇಸರಿಸಿದರು.


ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಸೋಮವಾರ ಪ್ಲಾಸ್ಟಿಕ್ ಮುಕ್ತ ನಗರ ಸಂಬಂಧ ಪುರಸಭೆಯಿಂದ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಸಭೆಯಿಂದ ಪ್ಲಾಸ್ಟಿಕ್ ಬಳಸದಂತೆ ಸಾಕಷ್ಟು ವರ್ಷಗಳಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ದಂಡ ವಿಧಿಸಿದರೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಪ್ರತಿದಿನ ಕಸ ಸಂಗ್ರಹಿಸುವ ಆಟೋ -ಟಿಪ್ಪರ್‌ಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಆದರೂ ಕೆಲ ಬುದ್ಧಿವಂತರು ಕದ್ದು ಮುಚ್ಚಿ ಪ್ಲಾಸ್ಟಿಕ್ ಮಾರಾಟದೊಂದಿಗೆ ಬಳಸುತ್ತಿದ್ದಾರೆ. ಹೀಗಾಗಿ ಪುರಸಭೆ ವ್ಯಾಪ್ತಿಯ ವಿವಿಧೆಡೆ ಬೀದಿ ನಾಟಕದ ಮೂಲಕ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುವುದು ಕಂಡು ಬಂದಲ್ಲಿ ಅಂತಹ ಅಂಗಡಿ ಮುಂಗಟ್ಟಿನ ಅನುಮತಿ ರದ್ದು ಪಡಿಸಲಾಗುವುದು ಎಂದರು.


ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜಗೆರೆ ಶಿವಣ್ಣ ಮತ್ತು ತಂಡ ಬೀದಿ ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಿತು.


ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯರಾದ ಜಗದೀಶ್, ದಿವ್ಯಾ, ಪ್ರಭಾಕರ್, ರತ್ನಾ, ಮಣಿ, ಉಷಾ, ಸೌಭಾಗ್ಯ, ಪುರಸಭೆ ಆರೋಗ್ಯಾಧಿಕಾರಿ ಜ್ಯೋತಿ, ಲೋಹಿತ್, ಕಂದಾಯಾಧಿಕಾರಿ ಪ್ರಸನ್ನ ಮತ್ತು ಸಿಬ್ಬಂದಿ ಇದ್ದರು.