ದಾವಣಗೆರೆ: ವಿದ್ಯಾರ್ಥಿಗಳ ಸಾಧನೆಗೆ ಸ್ವಸಾಮರ್ಥ್ಯದ ಅರಿವು ಜಾಗೃತವಾಗಬೇಕು. ಶಾಲಾ-ಕಾಲೇಜುಗಳ ಪಠ್ಯೇತರ ಚಟುವಟಿಕೆಗಳು ಇದಕ್ಕೆ ಪೂರಕವಾಗಬೇಕು ಎಂದು ವಾಗ್ಮಿ ಎಚ್.ಬಿ. ಮಂಜುನಾಥ್ ಹೇಳಿದರು.
ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್, ಎನ್‌ಸಿಸಿ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ‘ಸ್ನೇಹ ಸಂಪದ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ 139 ಕೋಟಿ ಜನಸಂಖ್ಯೆಯಲ್ಲಿ ಶೇ.64ರಷ್ಟು ಯುವಜನರಿದ್ದು ವಿಶ್ವವೇ ಇವರನ್ನು ಗಮನಿಸುತ್ತಿದೆ. ಈ ಯವಶಕ್ತಿಯು ಸಂಪನ್ಮೂಲವಾಗಿ ಹೊರಹೊಮ್ಮಿದಲ್ಲಿ ಜಗತ್ತನ್ನೇ ಆಳಬಲ್ಲರೆಂಬ ಇತರೆ ರಾಷ್ಟ್ರಗಳ ನಿರೀಕ್ಷೆ ಸಾಧ್ಯವಾಗಲಿದೆ. ಈ ದಿಸೆಯಲ್ಲಿ ನಮ್ಮ ಶಿಕ್ಷಣ ವಿಧಾನವು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕಿದೆ ಎಂದು ಹೇಳಿದರು.
ಆರ್ಥಿಕ, ಸಾಮಾಜಿಕ, ವಾಣಿಜ್ಯಾತ್ಮಕ ವಿಷಯಗಳ ಅಧ್ಯಯನ ಮಾಡುವ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಇದರ ಸಾಕಾರದಲ್ಲಿ ಚಿಂತಿಸಬೇಕಿದೆ. ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಲು ಶೈಕ್ಷಣಿಕ ಜ್ಞಾನವು ಸಾಧನವಾದರೆ ಜೀವನ ಪರೀಕ್ಷೆ ಎದುರಿಸಲು ಅನುಭವಾಧಾರಿತ ಜ್ಞಾನ ಅವಶ್ಯಕ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನೋಸ್ಥೈರ್ಯ, ಕ್ರೀಡೆೆಗಳಿಂದ ದೈಹಿಕ ಸಾಮರ್ಥ್ಯ, ಎನ್ನೆಸ್ಸೆಸ್ ಚಟುವಟಿಕೆಗಳಿಂದ ಗ್ರಾಮೀಣ ಬದುಕಿನ ಅನುಭ ಹಾಗೂ ಎನ್‌ಸಿಸಿ ವಿಭಾಗದಿಂದ ರಾಷ್ಟ್ರ ರಕ್ಷಣೆಯ ಪರಿಕಲ್ಪನೆ ಜಾಗೃತವಾಗಲಿದೆ. ಶಿಕ್ಷಣದಿಂದ ದೊರೆಯುವ ವಿದ್ವತ್ತಿನ ಜತೆಗೆ ವಿವೇಕ ಮತ್ತು ವಿವೇಚನೆಗಳು ಒಳಗೊಂಡಲ್ಲಿ ಯಾವುದೂ ಅಸಾಧ್ಯವಾಗದು ಎಂದು ಹೇಳಿದರು.
ಕಾಲೇಜಿನ ಅಧ್ಯಕ್ಷ ಎ.ಜಿ. ಮಂಜುನಾಥ್, ಪ್ರಾಚಾರ್ಯ ಡಾ. ಜೆ.ಬಿ.ಬೋರಯ್ಯ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಬೊಮ್ಮಣ್ಣ ಇದ್ದರು.
ಉಮಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಡಿ.ಬಿ. ಬಸವರಾಜ್ ಸ್ವಾಗತಿಸಿದರು. ಎ. ಹರ್ಷ- ವಿ. ಸಂಜನಾ ಕಾರ್ಯಕ್ರಮ ನಿರೂಪಿಸಿದರು. ಸಿ. ರವಿಕುಮಾರ್ ವಂದಿಸಿದರು. ಇದೇ ವೇಳೆ ಪ್ರತಿಭಾ ಪುರಸ್ಕಾರ ನಡೆಯಿತು.