ಜಿಲ್ಲೆ

ಜಾಗದ ವಿಚಾರಕ್ಕೆ ಹೊಡೆದಾಡಿಕೊಂಡ ಗ್ರಾಮಸ್ಥರು

ಸಕಲೇಶಪುರ: ತಾಲೂಕಿನ ಬ್ಯಾಗಡಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗ ಉಳಿಸುವ ವಿಚಾರಕ್ಕೆ ಗ್ರಾಮಸ್ಥರು ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಮರಗತ್ತೂರು ಗ್ರಾಮದ ಸರ್ವೇ ನಂ.16 ರಲ್ಲಿ ಮೂರು ಎಕರೆ ಸರ್ಕಾರಿ ಜಮೀನಿದ್ದು ಇದರಲ್ಲಿ ಶಾಲೆ, ಸಿಮೆಂಟ್ ಕಣ, ಅಂಗನವಾಡಿ, ದಾದಿಯ ವಿಶ್ರಾಂತಿ ಗೃಹ, ಬಸ್ ತಂಗುದಾಣ, ಗ್ರಾಪಂ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನುಳಿದ ಒಂದು ಎಕರೆ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಮೀನು ಮೀಸಲಿಡಲಾಗಿತ್ತು.

ಈ ಮಧ್ಯೆ ನಿವೇಶನರಹಿತ ಗುಂಡೇಗೌಡ ಎಂಬಾತ ಈ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇದಕ್ಕೆ ಗ್ರಾಮಸ್ಥರಿಂದ ಯಾವುದೇ ವಿರೋಧವಿರಲಿಲ್ಲ. ಇತ್ತೀಚೆಗೆ ಗುಂಡೇಗೌಡ ಮತ್ತಷ್ಟು ಜಮೀನು ಒತ್ತುವರಿಗಾಗಿ ಬೇಲಿ ನಿರ್ಮಿಸಿದ್ದರು. ಇದರಿಂದ ಕೆರಳಿದ ಗ್ರಾಮಸ್ಥರು ಬೇಲಿ ತೆರವುಗೊಳಿಸಿ ಸರ್ಕಾರಿ ಭೂಮಿ ಉಳಿಸಿ ಎಂದು ತಹಸೀಲ್ದಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗಿರಲಿಲ್ಲ.

ಇತ್ತ ಬೇಲಿ ನಿರ್ಮಿಸಿದ್ದ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಶೆಡ್ ನಿರ್ಮಿಸಿದ್ದರು. ಇದರಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು, ಶನಿವಾರ ಶೆಡ್ ತೆರವಿಗೆ ಮುಂದಾಗಿದ್ದರು. ಈ ವೇಳೆ ಗುಂಡೇಗೌಡರ ಪತ್ನಿ ಪ್ರೇಮಾ ಗ್ರಾಮಸ್ಥರ ಮೇಲೆ ಕಾರದ ಪುಡಿ ಎರಚಿ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಗ್ರಾಮಸ್ಥರಾದ ಉಮೇಶ್,ದಿನೇಶ್, ಸುಬ್ರಮಣ್ಯ, ವಸಂತ, ಪ್ರವೀಣ್ ಗಾಯಗೊಂಡು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತ ಹಲ್ಲೆ ನಡೆಸಿದ ಪ್ರೇಮಾ ಹಾಗೂ ಗುಂಡೇಗೌಡ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.