ಜಿಲ್ಲೆ

ಜಾಗತಿಕರಣಕ್ಕೆ ಜಾನಪದ ಸವಾಲಾಗಲಿ

ಶೃಂಗೇರಿ: ಯುವಪೀಳಿಗೆಗೆ ಶಿಕ್ಷಣದ ಜತೆಗೆ ಜಾನಪದ ಸಂಸ್ಕೃತಿ ಬಿತ್ತುವ ಅಗತ್ಯವಿದೆ ಎಂದು ಜಾನಪದ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜು ತಿಳಿಸಿದರು.

ಬಿಜಿಎಸ್ ವಿದ್ಯಾಲಯದಲ್ಲಿ ತಾಲೂಕು ಕರ್ನಾಟಕ ಜಾನಪದ ಪರಿಷತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಜಾನಪದ ಅರಿವು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಮಾತಿಗೆ ಅರ್ಥವಿದೆ. ಭಾವಕ್ಕೆ ಲಯವಿದೆ. ಕೃತಿಗೆ ನೀತಿಯಿದೆ. ಜಾನಪದ ಸಂಸ್ಕೃತಿಯಲ್ಲಿ ನೋವು-ನಲಿವಿದೆ. ಅನುಸಂಧಾನವಿದೆ. ನಂಬಿಕೆ ಇದೆ. ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಕಣಮಾಡುವಾಗ ಯಾವ ವಾದ್ಯಗಳ ಪರಿಕರಗಳು ಇರಲಿಲ್ಲ. ಇದುವೇ ಜಾನಪದ ಸಂಸ್ಕೃತಿ. ಬಾಯಿ ಮನೆಯ ಊಟ ಮಾಡು ಎಂದರೆ, ನಾಲಿಗೆ ಹೊರಗೆ ಊಟ ಮಾಡು ಎನ್ನುತ್ತದೆ. ಇದು ಆಧುನಿಕ ಸಂಸ್ಕೃತಿ. ಜಾಗತೀಕರಣಕ್ಕೆ ಜಾನಪದ ಸವಾಲಾಗಬೇಕು. ಆಗ ಮಾತ್ರ ದೇಶದ ಸಾಂಸ್ಕೃತಿಕ ನೆಲೆಗಟ್ಟಿನ ಅಸ್ಮಿತೆ ಉಳಿಯಲು ಸಾಧ್ಯ ಎಂದರು.

ದೇಶದ 1,460 ಕಲೆಗಳಲ್ಲಿ 420 ಕಲೆಗಳು ಉಳಿದಿದ್ದು 32 ಪ್ರದರ್ಶನ ಕಲೆಗಳು ಮಾತ್ರ ಜೀವಂತವಾಗಿವೆ. ನಮ್ಮಲ್ಲಿ 68 ದೃಶ್ಯ ಮಾಧ್ಯಮಗಳಿದ್ದರೂ ಯಾವ ಮಾಧ್ಯಮವೂ ಜಾನಪದ ಸಂಸ್ಕೃತಿ ಪ್ರಚಾರ ಪಡಿಸುವುದಿಲ್ಲ. ಅವಶ್ಯಕತೆ ಇರುವುದನ್ನು ನಾವು ಮರೆಯುತ್ತಿದ್ದೇವೆ. ಗ್ರೀಕ್ ದೇಶ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದ ದೇಶ. ವಾದ್ಯ, ನಾಟ್ಯ ಮುಂತಾದ ಸಂಸ್ಕೃತಿಯನ್ನು ಬಿತ್ತಿದ ಗ್ರೀಕ್ ದೇಶ ನಾಶದ ಅಂಚಿನಲ್ಲಿದೆ. ಹರ್ಷವರ್ಧನ ಮಹಾರಾಜನ ಕಾಲದಲ್ಲಿ ಯುದ್ಧದಲ್ಲಿ ಜನಪದ ಕಾಲವಿದರನ್ನು ಬಳಸಿಕೊಳ್ಳುತ್ತಿದ್ದರು. ಕತ್ತಿ, ಗುರಾಣಿಗಳ ಬೀಸುವಿಕೆಯಲ್ಲಿ ಅಂದು ಜಾನಪದ ಕಲಾವಿದರು ಮೊದಲಿಗರಾಗಿದ್ದರು. ಮೆಕ್ಸಿಕೋ ದೇಶದಲ್ಲಿ ಜಾನಪದದ ಸೊಗಡು ಈಗಲೂ ಇದೆ ಎಂದರು.

ದೇಶದ ಸಂಸ್ಕೃತಿಗೆ ಜಾನಪದದ ಕೊಡುಗೆ ಅಮೂಲ್ಯ. ತತ್ವ ಪದಗಳು ಬರವಣಿಗೆ ಮೂಲಕ ಚಾಲ್ತಿಗೆ ಬಂದಿತು. ಆದರೆ ಜನಪದ ಕಲೆ, ಅಡುಗೆ, ನೃತ್ಯ, ಗಾದೆ, ಉಡುಪು ಇತ್ಯಾದಿ ಜಾನಪದ ಸಂಸ್ಕೃತಿಯಿಂದ ಪರಿಮೂಡಿತ್ತು. ಜಾನಪದ ಅನಕ್ಷರಸ್ಥರ ಹೃದಯದಿಂದ ಬಂದ ಭಾವತುಂಬಿದ ಪದ. ಭಾವನೆಗಳ ಒಳಗಿರುವ ಬದುಕಿನ ಅರ್ಥವನ್ನು ಜಾನಪದ ತುಂಬಿಕೊಡುತ್ತದೆ. ರಾಜಕೀಯ ಮನಸ್ಸುಗಳನ್ನು ಒಡೆಯುತ್ತದೆ. ಆದರೆ ಜಾನಪದ ಮನಸ್ಸುಗಳನ್ನು ಕಟ್ಟುತ್ತದೆ. ಸಂತೋಷ, ಸಂಕಷ್ಟ, ಪ್ರೀತಿಗಳನ್ನು ಹಾಡಿನ ಮೂಲಕ ಲಕ್ಷಾಂತರ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಸಾರ ಮಾಡಿದರು. ಅಂತಹ ಜಾನಪದ ಗೀತೆಗಳು ಶಾಶ್ವತವಾಗಿ ಸಮುದಾಯದಲ್ಲಿ ನೆಲೆಯೂರಬೇಕಿದೆ.ಅದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.