ಬಾಗಲಕೋಟೆ: ವಿವಿಧ ಭಾಷೆ, ಜನಾಂಗ, ಸಂಸ್ಕೃತಿ, ಪರಂಪರೆ, ಧರ್ಮ, ಆಚಾರ, ವಿಚಾರಗಳನ್ನು ಅವಲಂಭಿಸಿರುವ ದೇಶ ಭಾರತವಾಗಿದ್ದು, ಈಗ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ ೭೪ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಆಧಾರದ ಮೇಲೆ ಅತ್ಯಂತ ಬಲಿಷ್ಟ ರಾಷ್ಟ್ರ, ಸ್ವಾವಲಂಬಿ ದೇಶವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು, ೧೯೫೦ ರ ಜನವರಿ ೨೬ ರಂದು ಜಾರಿಗೆ ಬಂದಿತು ಎಂದರು.
ಸರ್ಕಾರವು ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಗಾಗಿ ಹೆಚ್ಚಿನ ಕಾಳಜಿಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಯಶಸ್ವಿನಿ ಯೋಜನೆಯನ್ನು ಪರಿಷ್ಕೃತಗೊಳಿಸಿ ಮರು ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಭಾಗದ ರೈತರು ಮತ್ತು ಸಹಕಾರ ಸದಸ್ಯರ ಜೊತೆಗೆ ನಗರ ಪ್ರದೇಶದ ಬಡ ಜನರಿಗೂ ಉಚಿತ ಚಿಕಿತ್ಸೆ ದೊರೆಯುವಂತಾಗಿದೆ. ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸರ್ಕಾರ ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ ೧೫ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ವಿನಯ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.